ಹೊಸಂಗಡಿಯಲ್ಲಿ ಆಳ್ವಾಸ್ ಸಂಚಾರಿ ಚಿಕಿತ್ಸಾಲಯಕ್ಕೆ ಚಾಲನೆ

Update: 2016-11-05 11:35 GMT

ಮೂಡುಬಿದಿರೆ, ನ.5: ರಾಸಾಯನಿಕ ಆಹಾರ ಪದ್ಧತಿ, ದುಶ್ಚಟಗಳಿಂದಾಗಿ ನಮ್ಮ ಆರೋಗ್ಯ ಹದಗೆಡುತ್ತಿದ್ದು, ಸರಿಯಾದ ಸಮಯದಲ್ಲಿ ಮುಂಜಾಗ್ರತಾ ಕ್ರಮ, ಸೂಕ್ತ ಚಿಕಿತ್ಸೆ ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಜನರ ಆರೋಗ್ಯ ರಕ್ಷಣೆಗೆ ಆಳ್ವಾಸ್ ಸಂಸ್ಥೆಯವರು ಅನುಷ್ಠಾನಗೊಳಿಸಿರುವ ಸಂಚಾರಿ ಕ್ಲಿನಿಕ್ ಪ್ರಯತ್ನ ಶ್ಮಾಘನೀಯ ಎಂದು ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಆ್ಯಂಟನಿ ವಿ.ಲೂವಿಸ್ ಹೇಳಿದರು.

ಅವರು ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ ಇದರ ಆಶ್ರಯದಲ್ಲಿ ಹೊಸಂಗಡಿ ಗ್ರಾ.ಪಂ ಹಾಗೂ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಆಳ್ವಾಸ್ ಸಂಚಾರಿ ಚಿಕಿತ್ಸಾಲಯ ಹಾಗೂ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಉಚಿತ ಶಿಬಿರ, ಆಳ್ವಾಸ್ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮಕ್ಕೆ ಹೊಸಂಗಡಿ ಪಂಚಾಯತ್ ಆವರಣದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಪರಿಂಜೆ ಶ್ರೀಕ್ಷೇತ್ರ ಪಡ್ಯಾರಬೆಟ್ಟುವಿನ ಧರ್ಮದರ್ಶಿ ಎ.ಜೀವಂಧರ್ ಕುಮಾರ್, ಆಳ್ವಾಸ್ ಸಂಚಾರಿ ಚಿಕಿತ್ಸಾಲಯಕ್ಕೆ ಚಾಲನೆ ನೀಡಿದರು. ಪಡ್ಡಂದಡ್ಕ ನೂರಲ್‌ಹುದಾ ಜುಮ್ಮಾ ಮಸೀದಿಯ ಧರ್ಮಗುರು ಅಬೂಬಕ್ಕರ್ ಸಿದ್ದೀಕ್ ದಾರಿಮಿ ಆರೋಗ್ಯ ಕಾರ್ಡ್ ವಿತರಿಸಿದರು.

ತಾ.ಪಂ ಸದಸ್ಯ ಓಬಯ್ಯ ಮಾತನಾಡಿ, ಉತ್ತಮ ಆರೋಗ್ಯದ ದೃಷ್ಠಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯಪಾನ ಹಾಗೂ ತಂಬಾಕುಗಳನ್ನು ನಿಷೇಧ ಮಾಡಬೇಕಾಗಿದೆ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ, ದೇಶದಲ್ಲಿರುವ ಸಾಮಾಜಿಕ ಅಂತರವನ್ನು ದೂರವಾಗಿಸಲು ಸಾಂಘಿಕ ಪ್ರಯತ್ನ ಮಾಡುವುದು ಅನಿವಾರ್ಯ. ಗ್ರಾಮೀಣ ಪ್ರದೇಶದ ಅರ್ಹ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆ ನೆರವಾಗುತ್ತಿದೆ. ಶಿಕ್ಷಣ, ಆರೋಗ್ಯವಂತ ಸಮಾಜಕ್ಕಾಗಿ ಆಳ್ವಾಸ್ ಸಂಸ್ಥೆ ಹಲವಾರು ಯೋಜನೆಗಳನ್ನು ಮಾಡುತ್ತಿದೆ. ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಚಾರಿ ಕ್ಲಿನಿಕ್ ವ್ಯವಸ್ಥೆ ಸಹಕಾರಿಯಾಗಲಿದೆ ಹಾಗೂ ಆಳ್ವಾಸ್ ಯಶಸ್ವಿಯಾಗಿ ತಯಾರಿಸುತ್ತಿರುವ ಪ್ರೌಢಶಾಲಾ ಸ್ಟಡಿ ಮೆಟಿರಿಯಲ್‌ಗಳನ್ನು ಹೊಸಂಗಡಿ ಗ್ರಾ.ಪಂ ವ್ಯಾಪ್ತಿಯ ಎರಡು ಕನ್ನಡ ಮಾಧ್ಯಮ ಶಾಲೆಗೆ ನೀಡಲು ಆಳ್ವಾಸ್ ಸಂಸ್ಥೆ ತಯಾರಿದೆ. ಅವಕಾಶ ಸಿಕ್ಕಿದಲ್ಲಿ ಹೊಸಂಗಡಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗ್ರಾಮೋತ್ಸವ ಮಾಡುವ ಇರಾದೆಯಿದೆ ಎಂದು ತಿಳಿಸಿದರು.

 ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್ ಅತಿಥಿಯಾಗಿ ಮಾತನಾಡಿ, ಬಲಿಷ್ಠ ಸಮಾಜದ ನಿರ್ಮಾಣ ಮಾಡುವುದಕ್ಕೆ, ಸ್ವಾಮಿ ವಿವೇಕಾನಂದರ ತತ್ವಾದರ್ಶನಗಳಂತೆ ಡಾ.ಎಂ ಮೋಹನ ಆಳ್ವ ಸಮಾಜದ ಸೇವೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ವಿವಿಧ ಹಂತಗಳಲ್ಲಿ ಯಾವ ರೀತಿ ರೂಪಿಸಬೇಕು ಎನ್ನುವುದನ್ನು ಮಾದರಿಯನ್ನಾಗಿ ಮಾಡಿಕೊಂಡವರು ಡಾ.ಆಳ್ವ. ಹೊಸಂಗಡಿ ಗ್ರಾಮ ಪಂಚಾಯತ್ ರಾಷ್ಟ್ರಮಟ್ಟದಲ್ಲಿ ಮಿಂಚಲು, ಆಳ್ವಾಸ್ ಸಂಸ್ಥೆಯ ಕೊಡುಗೆಯೂ ಇದೆ ಎಂದರು.

ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯ ಓಬಯ್ಯ, ಹೊಸಂಗಡಿ ಗ್ರಾ.ಪಂ ಅಧ್ಯಕ್ಷೆ ಹೇಮಾ ವಸಂತ್ ಅತಿಥಿಗಳಾಗಿದ್ದರು. ಪುರಸಭಾ ಸದಸ್ಯ, ಕಾರ್ಯಕ್ರಮದ ಸಂಯೋಜಕ ಹರಿಪ್ರಸಾದ್ ಸ್ವಾಗತಿಸಿದರು. ಸಕೇಶ್ ಕಾರ್ಯಕ್ರಮ ನಿರೂಪಿಸಿದರು. ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪತಿ ಉಪಾಧ್ಯಾಯ ವಂದಿಸಿದರು.

ಸಬಾ ಕಾರ್ಯಕ್ರಮದ ಬಳಿಕ ಲ್ಯಾಪ್ರೋಕ್ ಶಸ್ತ್ರ ಚಿಕಿತ್ಸಾ ತಜ್ಞ ಡಾ.ವಿನಯ್ ಆಳ್ವ, ಎಲುಬು ಹಾಗೂ ಕೀಲು ತಜ್ಞ ಡಾ.ರೋಶನ್ ಶೆಟ್ಟಿ, ದಂತ ವೈದ್ಯ ಡಾ.ಅಮರ್‌ದೀಪ್ ಮುಂದಾಳತ್ವದಲ್ಲಿ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News