ಟಿಪ್ಪು ಜಯಂತಿ ಆಚರಿಸಲು ಅವಕಾಶ ನೀಡುವುದಿಲ್ಲ: ವಿಎಚ್‌ಪಿ, ಬಜರಂಗದಳ ಎಚ್ಚರಿಕೆ

Update: 2016-11-05 12:14 GMT

 ಮಂಗಳೂರು, ನ.5: ಅವಿಭಜಿತ ದ.ಕ. ಜಿಲ್ಲೆಯಲ್ಲಿ ನ.10ರಂದು ರಾಜ್ಯ ಸರಕಾರಿ ಪ್ರಾಯೋಜಿತ ಟಿಪ್ಪು ಜಯಂತಿಯನ್ನು ಆಚರಿಸಲು ಅವಕಾಶ ನೀಡುವುದಿಲ್ಲ ಎಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.
 
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಜಗದೀಶ್ ಶೇಣವ, ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ನ.7ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ನಡೆಸುವ ಪ್ರತಿಭಟನೆಯನ್ನು ವಿಹಿಂಪ ಮತ್ತು ಬಜರಂಗದಳ ಬೆಂಬಲಿಸಲಿದೆ ಎಂದರು. ಕಳೆದ ವರ್ಷ ಟಿಪ್ಪು ಜಯಂತಿ ವಿರುದ್ಧ ನಡೆದ ಅಹಿತಕರ ಘಟನೆಗಳಲ್ಲಿ ಕೆಲವು ಮಂದಿ ಸಾವಿಗೀಡಾಗಿದ್ದಾರೆ. ಈ ಬಾರಿ ಟಿಪ್ಪು ಜಯಂತಿಗೆ ಮುನ್ನವೇ ಪಿರಿಯಾಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಅಕ್ರಮ ಗೋಸಾಗಾಟವನ್ನು ತಡೆಗಟ್ಟಲು ಹರಿಯಾಣ ಮತ್ತು ರಾಜಸ್ತಾನ ಮಾದರಿಯಲ್ಲಿ ಹೈನುಗಾರರನ್ನು ಒಳಗೊಂಡಂತೆ ಗೋರಕ್ಷಾ ದಳಗಳನ್ನು ಪೊಲೀಸ್ ಇಲಾಖೆ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಾಂತ ಗೋರಕ್ಷಾಪ್ರಮುಖ ಕಟೀಲು ದಿನೇಶ್ ಪೈ ಈ ಸಂದರ್ಭ ಒತ್ತಾಯಿಸಿದರು.

ಮೂಡುಬಿದಿರೆ, ಬಂಟ್ವಾಳಗಳಲ್ಲಿ ಅಕ್ರಮ ಗೋಸಾಗಾಟ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾ ಎಸ್ಪಿ ಹಾಗೂ ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗಿದೆ. ಆದರೂ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತಿಲ್ಲ. ಮುಂದಿನ 10 ದಿನಗಳೊಳಗೆ ಗೋಕಳ್ಳರ ಜಾಲನ್ನು ಪೊಲೀಸರು ಭೇದಿಸಬೇಕು. ಗೋರಕ್ಷಾ ದಳ ರಚಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಿಂದೂ ಸಂಘಟನೆಗಳೇ ಗೋರಕ್ಷಾ ದಳಗಳನ್ನು ರಚಿಸಬೇಕಾಗುತ್ತದೆ ಎಂದವರು ಹೇಳಿದರು.

ಗೋಷ್ಠಿಯಲ್ಲಿ ಮುಖಂಡರಾದ ಗೋಪಾಲ ಕುತ್ತಾರ್, ಉಮೇಶ್, ಸಂತೋಷ್, ಪ್ರವೀಣ್ ಕುತ್ತಾರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News