‘ಕಾಡಂಕಲ್ಲ್ ಮನೆ’ಯಲ್ಲಿ ಬ್ಯಾರಿ-ತುಳು ಸಂಸ್ಕೃತಿಯ ದಟ್ಟ ಚಿತ್ರಣ ಅನಾವರಣ: ಸಂತೋಷ್ ಹೆಗ್ಡೆ

Update: 2016-11-06 13:24 GMT

ಮಂಗಳೂರು, ನ.6: ‘ಕಾಡಂಕಲ್ಲ್ ಮನೆ’ ಕಾದಂಬರಿಯಲ್ಲಿ ತುಳುನಾಡಿನ ಬ್ಯಾರಿ ಮತ್ತು ತುಳು ಸಂಸ್ಕೃತಿಯ ದಟ್ಟ ಚಿತ್ರಣವನ್ನು ಅನಾವರಣಗೊಂಡಿದೆ. ಧರ್ಮ -ಸಮುದಾಯಗಳ ನಡುವಿನ ಸಂಬಂಧವನ್ನು ಬೆಸೆಯುವಲ್ಲಿ ಈ ಕಾದಂಬರಿ ಯಶಸ್ವಿಯಾಗಿದೆ. ಕಾದಂಬರಿಯ ಮಾನವ ಸೌಹಾರ್ದದ ಸಂದೇಶವನ್ನು ಬದುಕಿನಲ್ಲಿ ಅಳವಡಿಸಬೇಕಾಗಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಹೇಳಿದರು.

ಹಿರಿಯ ಕಥೆಗಾರ ಮುಹಮ್ಮದ್ ಕುಳಾಯಿ ರಚಿಸಿದ, ಇರುವೆ ಪ್ರಕಾಶನ ಪ್ರಕಟಿಸಿದ ‘ಕಾಡಂಕಲ್ಲ್ ಮನೆ’ ಕಾದಂಬರಿಯನ್ನು ರವಿವಾರ ನಗರದ ಬಲ್ಮಠ ಜತ್ತನ್ನ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಥಿಯೋಲಾಜಿಕಲ್ ಸೊಸೈಟಿ ಮಂಗಳೂರು ಇದರ ಪ್ರಾಂಶುಪಾಲ ಹನಿಕಬ್ರಾಲ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ. ಬಿ. ಅಬ್ದುರ್ರಹ್ಮಾನ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ. ಎ. ಮುಹಮ್ಮದ್ ಹನೀಫ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಸ್ಥಾಪಕಾಧ್ಯಕ್ಷ ಅಬ್ದುರ್ರಹೀಂ ಟೀಕೆ, ಇನ್‌ಲ್ಯಾಂಡ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಶುಭ ಹಾರೈಸಿದರು.

ಪತ್ರಕರ್ತ, ಲೇಖಕ ಬಿ. ಎಂ. ಬಶೀರ್ ಕೃತಿಯನ್ನು ಪರಿಚಯಿಸಿದರು. ಕೃತಿಕಾರ ಮುಹಮ್ಮದ್ ಕುಳಾಯಿ, ಬಿ. ಸಚ್ಚಿದಾನಂದ ಶೆಟ್ಟಿ ಉಪಸ್ಥಿತರಿದ್ದರು. ಬಿ.ಎ. ಮುಹಮ್ಮದಲಿ ಕಾರ್ಯಕ್ರಮ ನಿರೂಪಿಸಿದರು. ಉಮರ್ ಯು.ಎಚ್. ವಂದಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲೇಖಕಿ ವೈದೇಹಿ, ಈ ಕಾದಂಬರಿಯಲ್ಲಿ ಕೇವಲ ಬ್ಯಾರಿಗಳ ಬದುಕಿನ ಕಥೆ ಅಲ್ಲ. ಇದು ನೊಂದ ಮಹಿಳೆಯರ ಕಥೆಯಾಗಿದೆ. ಇದು ಮಹಿಳೆಯರ ಮನದಲ್ಲಿ ತೊಳಲಾಡುವ ಬದುಕನ್ನು ಕಟ್ಟಿಕೊಟ್ಟಿವೆ. ಗಂಡಸರ ಲೋಕದಲ್ಲಿ ಹೆಂಗಸರು ಪಡುವ ಪಾಡನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಸಮಾಜ ಎದುರಿಸುವ ಆತಂಕ, ದುಗುಡ, ಹಿಂಸೆ, ನೋವನ್ನು ಹೇಳಲೇಬೇಕಾದ ಸನ್ನಿವೇಶ ಈ ಕಾದಂಬರಿಯ ಮೂಲಕ ಆಗಿದೆ. ಕೊಂಚ ಸಿನಿಮಾ ಶೈಲಿಯ ಎಳೆ ಕಂಡು ಬಂದರೂ ಕಾದಂಬರಿ ವಾಸ್ತವ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು.

ಸಮಸ್ಯೆಗಳನ್ನು ಹುಟ್ಟುಹಾಕುವವರಲ್ಲೂ ಸಮಸ್ಯೆ ಇದೆ. ತಮ್ಮಲ್ಲಿನ ಒಳ್ಳೆಯತನ ಬಚ್ಚಿಟ್ಟು ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಹೆಣ್ಮಕ್ಕಳು ಮನೆ ಬಿಟ್ಟು ಓಡಿ ಹೋಗಲು ಸಮಾಜವೇ ಕಾರಣ. ಇದನ್ನೂ ಕೂಡ ಈ ಕಾದಂಬರಿ ಚಿತ್ರಿಸಿದೆ. ಇದೆಲ್ಲಾ ಯಾತಕ್ಕಾಗಿ ಆಗುತ್ತಿದೆ ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದು ವೈದೇಹಿ ನುಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News