ಮಹಿಳೆ ರಾಜಕೀಯ ಮತ್ತು ಸಮಾಜದ ಕೊಂಡಿಯಾದಾಗ ಮಾತ್ರ ಪಕ್ಷ ಸಂಘಟನೆ: ಶಕುಂತಳಾ ಶೆಟ್ಟಿ

Update: 2016-11-06 16:16 GMT

ಮಂಗಳೂರು, ನ.6: ರಾಜಕೀಯ ಪ್ರವೇಶ ಮಾಡಿದ ಮಹಿಳೆಯು ರಾಜಕೀಯ ಮತ್ತು ಸಮಾಜದ ಕೊಂಡಿಯಾದಾಗ ಮಾತ್ರ ಪಕ್ಷ ಸಂಘಟನೆ ಸಾಧ್ಯ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಶಾಂತಿ ನಿಲಯದಲ್ಲಿ ಇಂದು ಸಂಜೆ ನಡೆದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪಕ್ಷದಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಕಾರ್ಯಕರ್ತೆಯರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರ ಅಹವಾಲುಗಳನ್ನು ಆಯಾ ಕ್ಷೇತ್ರದ ಶಾಸಕರಲ್ಲಿಗೆ ಕೊಂಡೊಯ್ದು ಪರಿಹಾರಕ್ಕೆ ಪ್ರಯತ್ನಿಸಬೇಕು. ಈ ಮೂಲಕ ಜನಬೆಂಬಲ ಗಳಿಸುವುದರ ಜೊತೆಗೆ ಪಕ್ಷ ಸಂಘಟನೆ ಮಾಡಲು ಸಾಧ್ಯವಿದೆ ಎಂದರು.

ಮಹಿಳೆಯು ತನಗಾಗುವ ಅನ್ಯಾಯವನ್ನು ಖಂಡಿಸುವ ಮತ್ತು ಅದರ ವಿರುದ್ಧ ಧ್ವನಿ ಎತ್ತುವಂತಾಗಬೇಕು. ಅನ್ಯಾಯವಾಗಿರುವ ಮಹಿಳೆಗೆ ನ್ಯಾಯ ಒದಗಿಸುವಲ್ಲಿ ಪ್ರಯತ್ನಿಸುವಂತಾಗಬೇಕು. ಅವಳಲ್ಲಿ ಧೈರ್ಯ ತುಂಬಿಸುವ ಕೆಲಸ ಮಾಡಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಮಹಿಳಾ ಶಕ್ತಿಯನ್ನು ತೋರಿಸಬೇಕೆಂದು ಶಕುಂತಲಾ ಶೆಟ್ಟಿ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಕೇವಲ ಸಮಾವೇಶಗಳು, ಸಭೆಗಳನ್ನು ನಡೆಸುವುದರಿಂದ ಸಂಘಟನೆ ಬಲವರ್ಧನೆ ಸಾಧ್ಯವಿಲ್ಲ. ಪ್ರತಿ ಬೂತ್‌ಮಟ್ಟದಲ್ಲಿ 10 ಮಹಿಳಾ ಕಾರ್ಯಕರ್ತೆಯರನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಕ್ರಿಯಾಶೀಲರನ್ನಾಗಿ ಮಾಡಬೇಕು. ಹೀಗಾದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ 220 ಬೂತ್‌ಗಳಲ್ಲಿ 2,200 ಸಕ್ರಿಯ ಕಾರ್ಯಕರ್ತರನ್ನು ಹೊಂದಲು ಸಾಧ್ಯವಾಗುತ್ತದೆ. ಈ ಮೂಲಕ ಮಹಿಳಾ ಶಕ್ತಿ ಗಟ್ಟಿಯಾದರೆ ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ಕಾಂಗ್ರೆಸ್ ಪಕ್ಷದ ಮಹಿಳಾ ಮೀಸಲಾತಿಯಿಂದಾಗಿ ಇಂದು ಮಹಿಳೆಯರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಮಹಿಳೆಯರಿಗೆ ಕಾಂಗ್ರೆಸ್ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಅಧಿಕವಾಗಿತ್ತು. ಜೈಲ್ ಸೇರಿದ್ದೇ ಬಿಜೆಪಿಗರ ಸಾಧನೆಯಾಗಿತ್ತು. ಎಂದವರು ವ್ಯಂಗ್ಯವಾಡಿದರು.

ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಹೆಚ್ಚಿನ ಕೊಡುಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಹೆಚ್ಚು ಗೌರವ ಹಾಗೂ ಮೀಸಲಾತಿಯನ್ನು ಒದಗಿಸಿದೆ. ಈ ಪಕ್ಷವನ್ನು ಬೆಳೆಸಿದವರು ಇಂದಿರಾ ಗಾಂಧಿ. ಬಡವರಿಗೆ ಕಾಂಗ್ರೆಸ್‌ನಿಂದ ಯಾವತ್ತೂ ಅನ್ಯಾಯವಾಗಿಲ್ಲ, ಹಾಗೆಯೇ ಶ್ರೀ ಮಂತರಿಗೆ ಬಿಜೆಪಿಯವರಿಂದ ಅನ್ಯಾಯವಾಗಿಲ್ಲ ಎಂದರು.

ಇಂದಿರಾ ಗಾಂಧಿಯವರ ಹುಟ್ಟು ಹಬ್ಬದ ಅಂಗವಾಗಿ ರಾಯಚೂರಿನಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಈ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸಲು ಚಿಂತನೆ ನಡೆದಿದೆ ಎಂದರು.

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮುಡಾದ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಕಾಂಗ್ರೆಸ್ ಮುಖಂಡರಾದ ಸುರೇಶ್ ಬಳ್ಳಾಲ್, ವಿಶ್ವಾಸ್‌ಕುಮಾರ್ ದಾಸ್, ಶಂಶುದ್ದೀನ್, ಪ್ರೇಮ್, ಟಿ.ಕೆ.ಸುಧೀರ್, ಬಾಲಕೃಷ್ಣ ಶಟ್ಟಿ, ನಮಿತಾ ಡಿ.ರಾವ್, ಶಶಿಕಲಾ ಕದ್ರಿ, ಸಬಿತಾ ಮಿಸ್ಕಿತ್, ನಾಗವೇಣಿ, ಲತಾ ಸಾಲ್ಯಾನ್, ಶೋಭಾ ಕೇಶವ, ಝುಬೈದಾ ಅಜೀಝ್, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಪ್ರತಿಭಾ ಕುಳಾಯಿ, ಆಶಾ ಡಿಸಿಲ್ವ, ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News