ಬಿಜೆಪಿ ಸೇರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ: ಹೆಗ್ಡೆ

Update: 2016-11-07 16:06 GMT

ಉಡುಪಿ, ನ.7: ಯಾವ ಪಕ್ಷ ಸೇರುವ ಕುರಿತು ಕಾರ್ಯಕರ್ತರ ಅಭಿ ಪ್ರಾಯ ಸಂಗ್ರಹಿಸಿದ್ದೇನೆ. ಪಕ್ಷ ಸೇರ್ಪಡೆ ಮಾಡುವ ಬಗ್ಗೆ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಬೆಂಬಲಿಗರು ಬಿಜೆಪಿ ಸೇರಲು ಬಹುಮತ ಕೊಟ್ಟಿದ್ದಾರೆ. ಆದರೆ ನಾನು ಪಕ್ಷ ಸೇರುವ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ ಎಂದು ಮಾಜಿ ಶಾಸಕ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಿಂದ ಆಹ್ವಾನ ಬಂದ ನಂತರ ದಿನೇಶ್ ಗುಂಡೂರಾವ್ ನನ್ನನ್ನು ಫೋನ್ ಮೂಲಕ ಸಂಪರ್ಕಿಸಿ ಪಕ್ಷಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕೂಡ ಪಕ್ಷದಲ್ಲೇ ಉಳಿಯುವಂತೆ ಹೇಳುತ್ತಿದ್ದಾರೆ. ಆದರೆ ಬೇರೆ ಯಾವ ಕಾಂಗ್ರೆಸ್ ನಾಯಕರು ಕೂಡ ಈ ಬಗ್ಗೆ ಮಾತನಾಡಿಲ್ಲ. ಅಲ್ಲದೆ ನನಗೆ ಜೆಡಿಎಸ್, ಆಮ್ ಆದ್ಮಿ ಪಕ್ಷಗಳಿಂದಲೂ ಕರೆ ಬಂದಿದೆ ಎಂದರು.

ಜಾತ್ಯತೀತತೆ ಎಂಬುದು ವ್ಯಕ್ತಿಯನ್ನು ಅವಲಂಬಿಸಿ ಇರುತ್ತದೆಯೇ ಹೊರತು ಪಕ್ಷವನ್ನಲ್ಲ. ನಾನು ಯಾವುದೇ ಪಕ್ಷ ಸೇರಿದರೂ ನನ್ನ ನಿಲುವುಗಳು ಬದಲಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ವಾತಾವರಣ ನೋಡಿದ್ದೇನೆ. ಬಿಜೆಪಿಯ ಒಳಗಿನ ವಾತಾವರಣ ಏನೆಂದು ಗೊತ್ತಿಲ್ಲ. ಪಕ್ಷ ಸೇರ್ಪಡೆಯ ದಿನ ನಿಗದಿ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು.

ರಾಜ್ಯದ ಸಾಕಷ್ಟು ನಾಯಕರು ಪಕ್ಷ ಸೇರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಜಿಲ್ಲಾ ನಿಯೋಗ ಕೂಡ ರಾಜ್ಯದ ಮುಖಂಡರೊಂದಿಗೆ ಈ ಕುರಿತು ಚರ್ಚೆ ನಡೆಸಿದೆ. ಜಯಪ್ರಕಾಶ್ ಹೆಗ್ಡೆ ಸೇರ್ಪಡೆಗೊಳ್ಳುವ ಬಗ್ಗೆ ಈವರೆಗೆ ನಿರ್ಧಾರ ಆಗಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ನಮ್ಮದು ಯಾವುದೇ ವಿರೋಧ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News