ಡಿಸಿ ಖಡಕ್ ಆದೇಶಕ್ಕೆ ಕಾರ್ಯಾಚರಣೆಗಿಳಿದ ಬಂಟ್ವಾಳ ಪುರಸಭೆ ಅಧಿಕಾರಿಗಳು

Update: 2016-11-08 11:26 GMT

ಬಂಟ್ವಾಳ, ನ.8: ಜಿಲ್ಲಾಧಿಕಾರಿಯವರು ಸೋಮವಾರ ಪುರಸಭೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಕೂರಿಸಿ ನಡೆಸಿದ ಸಭೆಯಲ್ಲಿ ನೀಡಿದ ಖಡಕ್ ಆದೇಶಕ್ಕೆ ಎಚ್ಚೆತ್ತ ಪುರಸಭೆೆಯ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯೇ ರಸ್ತೆಗಿಳಿದು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಪುರಸಭಾ ವ್ಯಾಪ್ತಿಗೆ ಒಳಪಟ್ಟ ಮೆಲ್ಕಾರಿನಲ್ಲಿ ರಸ್ತೆಯನ್ನು ಅಕ್ರಮಿಸಿರುವ ಕಟ್ಟಡಗಳು ಮತ್ತು ಅಂಗಡಿಗಳ ಸರ್ವೇ ಕಾರ್ಯ ನಡೆಸಿ ತೆರವಿಗೆ ಗುರುತು ಹಾಕಿ ಮಾಲಕರಿಗೆ ಸ್ವಯಂ ತೆರವುಗೊಳಿಸುವಂತೆ ತಾಕೀತು ಮಾಡಿದ್ದಾರೆ. ತಪ್ಪಿದಲ್ಲಿ ಪುರಸಭೆಯಿಂದಲೇ ತೆರವುಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಬುಧವಾರವೂ ಸರ್ವೇ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಮತ್ತೆ ಸರ್ವೇ ಕಾರ್ಯ ಮುಂದುವರಿಯಲಿದೆ ಎಂದು ಪುರಸಬಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ತಿಳಿಸಿದ್ದಾರೆ.

ಪಟ್ಟಣವಾಗಿ ಬೆಳೆಯುತ್ತಿರುವ ಮೆಲ್ಕಾರಿನ ರಸ್ತೆಗಳ ಅಗಲೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು ಡಾಮರೀಕರಣಗೊಳಿಸುವ ಕಾಮಗಾರಿಯು ಇನ್ನೊಂದೆಡೆ ನಡೆಯುತ್ತಿದೆ. ಮೆಲ್ಕಾರ್ ಪರಿಸರದಲ್ಲಿ ಬೃಹತ್ ವಾಣಿಜ್ಯ ಸಂರ್ಕೀಣಗಳು ಹಾಗೂ ಅಂಗಡಿಗಳು ಸಾರ್ವಜನಿಕ ರಸ್ತೆಯನ್ನೇ ಒತ್ತುವರಿ ಮಾಡಿರುವುದರಿಂದ ರಸ್ತೆ ಅಗಲೀಕರಣಕ್ಕೆ ಅಡಚಣೆ ಉಂಟುಮಾಡುತ್ತಿದ್ದಲ್ಲದೆ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ನಡೆದಾಡಲು ತೊಂದರೆಯುಂಟಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸರ್ವೇ ನಡೆಸಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಜಗದೀಶ್ ಮಂಗಳವಾರದ ಸಭೆಯಲ್ಲಿ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಬಂಟ್ವಾಳ ಪ್ರೊಬೆಷನರಿ ಸಹಾಯಕ ಆಯುಕ್ತೆ ಗಾರ್ವಿ ಜೈನ್ ಅವರ ನೇತೃತ್ವದಲ್ಲಿ ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಹಾಗೂ ಕಂದಾಯ, ಸರ್ವೇ ಇಲಾಖೆ ಜಂಟಿಯಾಗಿ ಸರ್ವೇ ಕಾರ್ಯಾಚರಣೆ ನಡೆಸಿದೆ.

ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯೊಬ್ಬರು ಬಂಟ್ವಾಳ ಪುರಸಭೆಯಲ್ಲಿ ಪುರಸಭೆಯ ಅಧಿಕಾರಿಗಳು, ಬಂಟ್ವಾಳ ಟ್ರಾಫಿಕ್ ಪೊಲೀಸ್, ತಾಲೂಕು ಮಟ್ಟದ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಕೂರಿಸಿ ಸಮಸ್ಯೆಗಳನ್ನು ಆಲಿಸಿ ಇದರ ಗಂಭೀರತೆಯನ್ನು ಅರಿತುಕೊಂಡು ಪರಿಹಾರಕ್ಕೆ ತಮ್ಮ ಅಧೀನದ ಎಲ್ಲ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶವನ್ನು ನೀಡಿದ್ದಾರೆ. ಇದರ ಫಲಶೃತಿ ಎಂಬಂತೆ ಪುರಸಭಾಧಿಕಾರಿಗಳು ರಸ್ತೆಗಿಳಿದು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News