ದಾಂಧಲೆ ನಡೆಸಿ ಸುದ್ದಿಯಾಗಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆತ್ಮಹತ್ಯೆಗೆ ಶರಣು

Update: 2016-11-09 05:54 GMT

ಕಾಸರಗೋಡು, ನ.9: ಸುಳ್ಯದಲ್ಲಿ ದಾಂಧಲೆ ನಡೆಸಿ ಎಸ್ಸೈ ಸೇರಿದಂತೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಸುದ್ದಿಯಾಗಿದ್ದ ಕಾಸರಗೋಡು ಜಿಲ್ಲಾ ನ್ಯಾಯಿಕಾ ದಂಡಾಧಿಕಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ.
ಕಾಸರಗೋಡಿನಲ್ಲಿ ಜಿಲ್ಲಾ ನ್ಯಾಯಿಕಾ ದಂಡಾಧಿಕಾರಿ ಮೂಲತಃ ತ್ರಿಶೂರ್ ನಿವಾಸಿ ಉಣ್ಣಿಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ 46 ವರ್ಷ ವಯಸ್ಸಾಗಿತ್ತು. ಇಲ್ಲಿನ ವಿದ್ಯಾನಗರದಲ್ಲಿರುವ ಸರಕಾರಿ ಕ್ವಾಟ್ರರ್ಸ್‌ನಲ್ಲಿ ಅವರ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಳ್ಯದಲ್ಲಿ ನಡೆದ ಘಟನೆಯ ವಿವರ:  ಕಾಸರಗೋಡಿನಲ್ಲಿ ಜಿಲ್ಲಾ ನ್ಯಾಯಿಕಾ ದಂಡಾಧಿಕಾರಿಯಾಗಿದ್ದ ಉಣ್ಣಿಕೃಷ್ಣನ್ ನ.6ರಂದು ದ.ಕ. ಜಿಲ್ಲೆಯ ಸುಬ್ರಹ್ಮಣ್ಯಕ್ಕೆ ಹೋಗಿದ್ದವರು ಬಳಿಕ ಅಲ್ಲಿಂದ ಸಂಜೆ ಸುಳ್ಯಕ್ಕೆ ತೆರಳಿದ್ದರು. ಅಲ್ಲಿನ ಬಸ್ ನಿಲ್ದಾಣದಿಂದ ಆಟೋರಿಕ್ಷಾವೊಂದನ್ನು ಹಿಡಿದ ಉಣ್ಣಿಕೃಷ್ಣನ್‌ರವರು ಅದರ ಚಾಲಕ ಅಬೂಬಕರ್ ಎಂಬವರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು. ಆದರೆ ಇಂಗ್ಲಿಷ್ ಅರ್ಥವಾಗದ ಹಿನ್ನೆಲೆಯಲ್ಲಿ ಅಬೂಬಕರ್ ಮಲಯಾಳಂನಲ್ಲಿ ಪ್ರಶ್ನಿಸಿದಾಗ ಅವರ ಮೇಲೆ ಉಣ್ಣಿಕೃಷ್ಣನ್ ಹಲ್ಲೆ ಮಾಡಿದ್ದರೆನ್ನಲಾಗಿದೆ. ಇದರಿಂದ ಭೀತನಾದ ಅಬೂಬಕರ್ ರಿಕ್ಷಾವನ್ನು ನೇರವಾಗಿ ಸುಳ್ಯ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು. ಅಲ್ಲೂ ಅಬೂಬಕರ್ ಮೇಲೆ ಉಣ್ಣಿಕೃಷ್ಣನ್ ಹಲ್ಲೆ ಮಾಡಿದ್ದರೆನ್ನಲಾಗಿದ್ದು, ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸ್ ಕಾನ್‌ಸ್ಟೇಬಲ್ ಸುಚಿನ್ ಹಾಗೂ ಗೃಹರಕ್ಷಕ ಅಬ್ದುಲ್ ಗಫೂರ್‌ರ ಮೇಲೂ ಹಲ್ಲೆ ನಡೆಸಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಳಿಕ ಠಾಣೆಯೊಳಗೆ ಕರೆದೊಯ್ದಗ ಉಣ್ಣಿಕೃಷ್ಣನ್ ಅವರು ಎಎಸ್ಸೈ ಪುರುಷೋತ್ತಮ ಮತ್ತು ಎಸ್ಸೈ ಚಂದ್ರಶೇಖರ್ ಅವರ ಕಾಲರ್ ಹಿಡಿದು ಅನುಚಿತವಾಗಿ ವರ್ತಿಸಿದ್ದರೆನ್ನಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆಯ ವೇಳೆ ಉಣ್ಣಿಕೃಷ್ಣನ್ ಪಾನಮತ್ತರಾಗಿದ್ದರು ಎಂದು ರಿಕ್ಷಾ ಚಾಲಕ ಹಾಗೂ ಹಲ್ಲೆಗೊಳಗಾದ ಪೊಲೀಸರು ಪೊಲೀಸ್ ದೂರಿನಲ್ಲಿ ತಿಳಿಸಿದ್ದರು. ಆ ಬಳಿಕ ಅವರನ್ನು ಕಾಸರಗೋಡು ಪೊಲೀಸರು ಆಗಮಿಸಿ ಠಾಣೆಯಿಂದ ಕರೆದೊಯ್ದಿದ್ದರು.
ಈ ಘಟನೆಯಿಂದ ಆಘಾತಗೊಂಡಿದ್ದ ನ್ಯಾಯಿಕಾ ದಂಡಾಧಿಕಾರಿ ಉಣ್ಣಿಕೃಷ್ಣನ್ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಉಣ್ಣಿಕೃಷ್ಣನ್‌ರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಉಣ್ಣಿಕೃಷ್ಣನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದು, ಅವರು ತ್ರಿಶ್ಯೂರಿನಲ್ಲಿ ವಾಸ್ತವವಿದ್ದಾರೆ. ಉಣ್ಣಿಕೃಷ್ಣನ್ ವಿದ್ಯಾನಗರದಲ್ಲಿರುವ ತನ್ನ ಸರಕಾರಿ ವಸತಿಗೃಹದಲ್ಲಿ ಒಂಟಿಯಾಗಿ ವಾಸವಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News