ನೋಟು ನಿಷೇಧ: ಮಂಗಳೂರಿನ ಪರಿಸ್ಥಿತಿ ಹೇಗಿದೆ ನೋಡಿ

Update: 2016-11-09 15:09 GMT

ಮಂಗಳೂರು, ನ.9: ಕೇಂದ್ರ ಸರಕಾರವು ದಿಢೀರ್ ಆಗಿ 500 ಮತ್ತು 1,000 ರೂಪಾಯಿಯ ನೋಟುಗಳನ್ನು ಅಮಾನ್ಯಗೊಳಿಸಿದ ಹಿನ್ನೆಲೆಯಲ್ಲಿ ‘ಉದ್ಭವಿಸಿದ’ ಚಿಲ್ಲರೆ ಸಮಸ್ಯೆಯಿಂದ ಮಂಗಳೂರು ನಗರ ತತ್ತರಿಸಿದೆ. ವ್ಯಾಪಾರ-ವಹಿವಾಟು ಭಾಗಶ: ಕುಸಿದಿದೆ. ಸೆಂಟ್ರಲ್ ಮಾರ್ಕೆಟ್, ಮೀನು ಮಾರ್ಕೆಟ್, ಸ್ಟೇಟ್‌ಬ್ಯಾಂಕ್ ಬಳಿಯ ಬೀದಿಬದಿ ವ್ಯಾಪಾರ ಕೇಂದ್ರಗಳು ಬಿಕೋ ಎನ್ನುತ್ತಿವೆ. ವ್ಯಾಪಾರಿಗಳು ಅಕ್ಷರಶ: ಚಿಂತಾಕ್ರಾಂತರಾಗಿದ್ದಾರೆ.

ಇನ್ನು ಚಿನ್ನಾಭರಣ ಮಳಿಗೆಗಳ, ಡೀಸೆಲ್-ಪೆಟ್ರೋಲ್ ಬಂಕ್‌ಗಳ, ಜಿನಸು, ಬಟ್ಟೆಬರೆ, ಇಲೆಕ್ಟ್ರಾನಿಕ್ಸ್ ಅಂಗಡಿಗಳ, ಹೊಟೇಲುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲ ಕಡೆಯೂ ‘ಚಿಲ್ಲರೆ’ಯದ್ದೇ ಸಮಸ್ಯೆಯಾಗಿದೆ. ‘ಚಿಲ್ಲರೆ’ ಬಗ್ಗೆಯೇ ಚರ್ಚೆ ಮಾಡಲಾಗುತ್ತಿವೆ. ‘ಚಿಲ್ಲರೆ’ಯೇ ಸದ್ದು ಮಾಡುತ್ತಿವೆ. ಕೆಲವೆಡೆ ‘ಚಿಲ್ಲರೆ’ ವಾಗ್ವಾದಕ್ಕೂ ಕಾರಣವಾಗಿದೆ. ವ್ಯವಹಾರದಲ್ಲಿ ತೀರಾ ಕುಸಿತ ಕಂಡುಬಂದಿದೆ.

ಹಣವಿದ್ದರೂ ಚಿನ್ನಾಭರಣ ಖರೀದಿಸಲಾಗದ ಸಮಸ್ಯೆ

ನಗರದ ಕೆಲವು ಚಿನ್ನಾಭರಣ ಮಳಿಗೆಗಳಲ್ಲಿ 500, 1,000ರ ನೋಟುಗಳನ್ನು ಪಡೆಯುತ್ತಿಲ್ಲ. ಇನ್ನು ಕೆಲವು ಕಡೆ ಪಡೆಯಲಾಗುತ್ತಿವೆ. ಕೆಲವು ಖರೀದಿದಾರರಿಗೆ ನಿರ್ದಿಷ್ಟ ಮಳಿಗೆಗಳಲ್ಲಿ ಚಿನ್ನಾಭರಣ ಖರೀದಿಸುವ ಆಸೆ. ಆದರೆ, ಅಲ್ಲಿ 500, 1,000ರ ನೋಟುಗಳನ್ನು ಸ್ವೀಕರಿಸದ ಕಾರಣ ಹಣವಿದ್ದರೂ ತಮಗೆ ಬೇಕಾದ ಮಳಿಗೆಗಳಿಂದ ಚಿನ್ನಾಭರಣ ಖರೀದಿಸಲಾಗದ ಸಮಸ್ಯೆಯಾಗಿವೆ.

‘ನಾವು 500, 1,000ರ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಗ್ರಾಹಕರಲ್ಲಿ ಮೊದಲೇ ಈ ವಿಷಯವನ್ನು ತಿಳಿಸುತ್ತೇವೆ. ಒಂದೋ ಕ್ರಾಸ್ ಚೆಕ್ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಪಡೆಯುತ್ತೇವೆ. ಆದರೆ, ಹಣ ನಮ್ಮ ಕೈ ಸೇರಿದ ಬಳಿಕವೇ ನಾವು ಚಿನ್ನಾಭರಣ ನೀಡುತ್ತೇವೆ’ ಎಂದು ನಗರದ ಚಿನ್ನಾಭರಣ ಮಳಿಗೆಯೊಂದರ ವ್ಯವಸ್ಥಾಪಕರು ತಿಳಿಸಿದ್ದಾರೆ.

‘ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ತುರ್ತಾಗಿ ಚಿನ್ನಾಭರಣ ಬೇಕಾದವರಿಗೆ 500, ಮತ್ತು 1,000ರ ನೋಟು ಸ್ವೀಕರಿಸಿ ಚಿನ್ನಾಭರಣ ನೀಡುವಿರಾ?’ ಎಂದು ಪ್ರಶ್ನಿಸಿದರೆ, ‘ಸದ್ಯ ನಾವಂತೂ 500, 1,000ರ ನೋಟು ಸ್ವೀಕರಿಸುತ್ತಿಲ್ಲ. ‘ಚಿಲ್ಲರೆ’ ಕೊಟ್ಟು ಚಿನ್ನಾಭರಣ ಖರೀದಿಸಬಹುದು’ ಎಂದು ಅವರು ಹೇಳುತ್ತಾರೆ.

‘ನನಗಂತೂ ಇಂದು ಚಿಲ್ಲರೆಯದ್ದೇ ಸಮಸ್ಯೆಯಾಗಿದೆ. ಹಾಗಾಗಿ ನಾನು ಅಂಗಡಿಗೆ ಬೀಗ ಹಾಕಿದೆ’ ಎನ್ನುತ್ತಾರೆ ಮಾರ್ಕೆಟ್ ರಸ್ತೆಯ ಜ್ಯುವೆಲ್ಲರಿ ಅಂಗಡಿಯ ಮಾಲಕರೊಬ್ಬರು. ಇದೇ ಮಾತನ್ನು ಈ ರಸ್ತೆಯ ಬಟ್ಟೆ ಅಂಗಡಿಯ ಮಾಲಕ ಕೂಡ ಪುನರುಚ್ಚರಿಸುತ್ತಾರೆ.

ಚಿನ್ನದ ಬೆಲೆ ಏರಿಕೆ

‘ಚಿಲ್ಲರೆ’ ಸಮಸ್ಯೆಯ ಅವಾಂತರದ ಮಧ್ಯೆ ಚಿನ್ನಾಭರಣದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ನಿನ್ನೆಗಿಂತ ಗ್ರಾಂವೊಂದಕ್ಕೆ ಸುಮಾರು 280ರೂ.ನಷ್ಟು ಏರಿಕೆ ಕಂಡು ಬಂದಿದ್ದು, ಇದು ಚಿನ್ನಾಭರಣ ಖರೀದಿದಾರರಿಗೆ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ.

ಸೆಂಟ್ರಲ್ ಮಾರ್ಕೆಟ್

ನಗರದ ಸೆಂಟ್ರಲ್ ಮಾರ್ಕೆಟ್ ಕೂಡಾ ಬಿಕೋ ಎನ್ನುತ್ತಿವೆ. ಸದಾ ಗಿಜಿಗುಟ್ಟುತ್ತಿದ್ದ ಮಾರ್ಕೆಟ್‌ನಲ್ಲಿ ಇಂದು ಜನರ ಓಡಾಟವೇ ವಿರಳವಾಗಿತ್ತು. ಗ್ರಾಹಕರಿಲ್ಲದೆ ವ್ಯಾಪಾರಸ್ಥರು ಹತಾಶರಾಗಿದ್ದರು. ಮಾರ್ಕೆಟ್‌ಗೆ ಆಗಮಿಸಿದ ಗ್ರಾಹಕರು ಹೆಚ್ಚಾಗಿ 500ರ ನೋಟುಗಳನ್ನು ತೋರಿಸುವುದು ಸಾಮಾನ್ಯವಾಗಿತ್ತು. ಕೆಲವರು ಉಪಾಯವಿಲ್ಲದೆ ಆ ಹಣವನ್ನು ಪಡೆದು ಚಿಲ್ಲರೆ ನೀಡಿದರೆ, ಇನ್ನು ಕೆಲವು ವ್ಯಾಪಾರಿಗಳು ಸಾಮಗ್ರಿಗಳನ್ನು ಪಡೆಯುವ ಮುನ್ನವೇ ‘ಚಿಲ್ಲರೆ’ ಇದ್ದರೆ ಮಾತ್ರ ವ್ಯವಹರಿಸಿ ಎಂದು ಹೇಳಿಕೊಳ್ಳುತ್ತಾರೆ.

ಸೆಂಟ್ರಲ್ ಮಾರ್ಕೆಟ್‌ನ ತರಕಾರಿ, ಹಣ್ಣುಹಂಪಲು, ಜಿನಸು, ಮಾಂಸದ ಅಂಗಡಿಗಳಲ್ಲೂ ಕೂಡ ‘ಚಿಲ್ಲರೆ’ಯೇ ಸಮಸ್ಯೆಯಾಗಿ ಕಾಡಿದೆ. ಮೋದಿ ಸರಕಾರ ಈ ರೀತಿಯ ಆಘಾತ ನೀಡುತ್ತದೆ ಎಂದು ನಾವು ಭಾವಿಸಿರಲಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಎಲ್ಲರೂ 500ರ ನೋಟು ಕೊಟ್ಟರೆ ನಾವು ‘ಚಿಲ್ಲರೆ’ ಎಲ್ಲಿಂದ ಕೊಡುವುದು?ಎಂದು ವ್ಯಾಪಾರಿಗಳು ಪ್ರಶ್ನಿಸಿದರೆ, ‘ಚಿಲ್ಲರೆ’ಯೇ ಚಲಾವಣೆಯಾಗದಿದ್ದರೆ ನಾವು ಎಲ್ಲಿಂದ ಚಿಲ್ಲರೆ ತರುವುದು ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.

ಬೀದಿ ಬದಿ ವ್ಯಾಪಾರ

ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಬೀದಿ ಬದಿ ವ್ಯಾಪಾರಿಗಳ ಅಳಲು ಕೂಡಾ ಇದೇ ಆಗಿದೆ. ಅಲ್ಲೂ ಕೂಡ ಗ್ರಾಹಕರೇ ಕಾಣಿಸುತ್ತಿಲ್ಲ. ವ್ಯಾಪಾರದಲ್ಲಿ ತೀರಾ ಕುಸಿತ ಕಂಡು ಬಂದಿದೆ. ನಮಗೆ ಪ್ರತಿ ದಿನ ನಾಲ್ಕೈದು ಸಾವಿರ ರೂಪಾಯಿಯ ವ್ಯಾಪಾರವಾಗುತ್ತದೆ. ಆದರೆ, ಈವತ್ತು 1 ಸಾವಿರ ಕೂಡಾ ಆಗಿಲ್ಲ. ‘ಚಿಲ್ಲರೆ’ ಸಮಸ್ಯೆ ನಮಗೆ ಇನ್ನಿಲ್ಲದಂತೆ ಕಾಡಿದೆ. ಸರಕಾರ ಹಠಾತ್ ಆಗಿ ಇಂತಹ ನಿರ್ಧಾರಕ್ಕೆ ಬಂದರೆ ನಾವು ಏನು ಮಾಡಲಿ? ಎಂದು ಬೀದಿಬದಿ ವ್ಯಾಪಾರಿಗಳಾದ ಸಲಾಂ, ಇಸ್ಮಾಯೀಲ್ ಮತ್ತಿತರ ಪ್ರಶ್ನೆಯಾಗಿದೆ.

‘ಮನೆಯಲ್ಲೇ ತರಕಾರಿ ಬೆಳೆದು ಇಲ್ಲಿಗೆ ತಂದು ಮಾರಾಟ ಮಾಡುತ್ತೇನೆ. ಬೆಳಗ್ಗೆ 500ರ ನೋಟುಗಳನ್ನು ಹೆದರಿ ತೆಗೆಯುತ್ತಿರಲಿಲ್ಲ. ಈಗ ತೆಗೆಯದೆ ಉಪಾಯವಿಲ್ಲ. ಎಲ್ಲರೂ 500ರ ನೋಟು ತೋರಿಸುತ್ತಾರೆ. ತೆಗೆಯದಿದ್ದರೆ ನಾನು ಬೆಳೆದ ಈ ತರಕಾರಿ ನಾಳೆಗೆ ಕೊಳೆಯಬಹುದು. ಲಾಭವೋ, ನಷ್ಟವೋ ತರಕಾರಿ ಖಾಲಿ ಮಾಡಬೇಕು’ ಎಂದು ಹೇಳುತ್ತಾರೆ, ಬಂಗ್ರ ಕೂಳೂರಿನ ಮೇಬನ್. ಅಂಬ್ಲಮೊಗರು ಗ್ರಾಮದ ಮದಕ ಮತ್ತು ಪೆರ್ಮನ್ನೂರು ಗ್ರಾಮದ ಆಡಂಕುದ್ರುವಿನ ಮಹಿಳಾ ತರಕಾರಿ ವ್ಯಾಪಾರಿಗಳು ಕೂಡಾ ಇದೇ ಮಾತನ್ನು ಹೇಳುತ್ತಾರೆ.

ಮೀನು ಮಾರುಕಟ್ಟೆ

ನಗರದ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಹಸಿ ಮತ್ತು ಒಣ ಮೀನು ಮಾರುಕಟ್ಟೆಯಲ್ಲೂ ಇದೇ ಸ್ಥಿತಿ ಇದೆ. ಕೆಲವರು 500, 1,000 ರೂ. ಕೊಟ್ಟರೆ ಸ್ವೀಕರಿಸುತ್ತಾರೆ. ಇನ್ನು ಕೆಲವರು ಸ್ವೀಕರಿಸುತ್ತಿಲ್ಲ. ಆದರೆ, ‘ಚಿಲ್ಲರೆ’ಯ ಪ್ರಶ್ನೆಯೇ ಇಲ್ಲ. 500, 1,000 ರೂ. ಕೊಟ್ಟರೆ ಅಷ್ಟೇ ಮೊತ್ತದ ಮೀನು ಕೊಡುತ್ತಾರೆ.

ಈ ಸರಕಾರ ರಾತ್ರಿ ಬೆಳಗಾಗುವುದರೊಳಗೆ ಹೀಗೆ ಮಾಡುವುದು ಸರಿಯಾ? ಪೂ.11 ಗಂಟೆಯಾಗುವಾಗ ನಮ್ಮಲ್ಲಿದ್ದ ಅರ್ಧಕ್ಕರ್ಧ ಮೀನುಗಳು ಖಾಲಿಯಾಗಿರುತ್ತದೆ. ಆದರೆ, ಇಂದು ಮಧ್ಯಾಹ್ನ 1 ಗಂಟೆಯಾದರೂ ಮೀನುಗಳು ಖಾಲಿಯಾಗಿಲ್ಲ. ‘ಚಿಲ್ಲರೆ’ ಇಲ್ಲದ ಕಾರಣ ಮೀನನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ದಕ್ಕೆಯಿಂದ ನಾವು ಸಾಲ ಮಾಡಿಯೇ ಮೀನು ತಂದಿದ್ದೇವೆ. ಅಲ್ಲೂ ಕೂಡ 500 ಮತ್ತು 1,000ರ ನೋಟು ಬೇಡ ಎಂದಿದ್ದಾರೆ. ನಾವು ಈ ನೋಟುಗಳನ್ನು ಏನು ಮಾಡಲಿ?’ ಎಂದು ಕಳೆದ 40ಕ್ಕೂ ಅಧಿಕ ವರ್ಷದಿಂದ ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಹಿರಿಯ ಮಹಿಳೆಯೊಬ್ಬರು ಪ್ರಶ್ನಿಸುತ್ತಾರೆ.

ಚಾ,ತಿಂಡಿ-ಊಟಕ್ಕೂ ಪರದಾಟ

ನಗರದ ಬಹುತೇಕ ಹೊಟೇಲುಗಳಲ್ಲಿ 500, 1,000ರ ನೋಟುಗಳನ್ನು ಸ್ವೀಕರಿಸುತ್ತಿಲ್ಲ ಎಂದು ಬೋರ್ಡ್ ತಗಲಿಸಲಾಗಿದೆ. ಹಾಗಾಗಿ ಅನೇಕ ಮಂದಿ ‘ಚಿಲ್ಲರೆ’ಯಿಲ್ಲದ ಕಾರಣ ಹೊಟೇಲುಗಳ ಬಳಿ ಸುಳಿದಾಡಲಿಲ್ಲ. ಕೆಲವರು 500ರ ನೋಟನ್ನು ಸ್ವೀಕರಿಸುವಿರಾ? ಎಂದು ಕೇಳಿಯೇ ಹೊಟೇಲು ಪ್ರವೇಶಿಸುತ್ತಾರೆ. ಕೆಲವು ಹೊಟೇಲು ಮಾಲಕರು ಇದಕ್ಕೆ ಒಪ್ಪಿದರೆ ಇನ್ನು ಕೆಲವರು ಚಿಲ್ಲರೆ ತನ್ನಿ ಎನ್ನುತ್ತಾರೆ. ಒಟ್ಟಿನಲ್ಲಿ ಚಾ,ತಿಂಡಿ, ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ.

ನಗರದ ಕೆಲವು ಹೊಟೇಲುಗಳಲ್ಲಿ ಕ್ಯಾಶಿಯರ್ ಮತ್ತು ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದ ಬಗ್ಗೆಯೂ ವರದಿಯಾಗಿದೆ. ಸೆಂಟ್ರಲ್ ಮಾರ್ಕೆಟ್ ಸಮೀಪದ ಹೊಟೇಲೊಂದರ ಮಾಲಕ ಚಿಲ್ಲರೆ ಇಲ್ಲದಿದ್ದರೆ ‘ವಾಚ್’ ಬಿಚ್ಚಿ ಹೋಗು ಎಂದು ಹೇಳಿದ್ದಯ ವಾಗ್ವಾದಕ್ಕೆ ಕಾರಣವಾಗಿದೆ.

ಪೆಟ್ರೋಲ್ ಬಂಕ್‌ಗಳಲ್ಲೂ

ನಗರದ ಕೆಲವು ಬಂಕ್‌ಗಳಲ್ಲಿ 500, 1,000ರ ನೋಟು ತೋರಿಸಿದರೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವುದಿಲ್ಲ. ಅಲ್ಲೂ ‘ಚಿಲ್ಲರೆ’ ಕೊಡಿ ಎಂದು ಕೇಳುತ್ತಾರೆ. ಇನ್ನು ಕೆಲವು ಕಡೆಗಳ ಬಂಕ್‌ಗಳಲ್ಲಿ 500, 1,000 ರೂಪಾಯಿಯ ಇಂಧನ ಹಾಕಿಸಿಕೊಳ್ಳಲು ಅಡ್ಡಿಯಿಲ್ಲ. 500 ರೂ.ಕೊಟ್ಟು 300 ರೂಪಾಯಿಯ ಪೆಟ್ರೋಲ್ ಹಾಕಿಸಿ ಅಂದರೆ ಆಗುವುದಿಲ್ಲ. 500 ಅಥವಾ 1,000 ರೂ. ಕೊಟ್ಟರೆ ಅಷ್ಟೇ ಮೊತ್ತದ ಪೆಟ್ರೋಲ್, ಡೀಸೆಲ್ ಹಾಕಿಸುತ್ತೇವೆ ಎಂದು ಪೆಟ್ರೋಲ್ ಬಂಕ್‌ವೊಂದರ ಸಿಬ್ಬಂದಿ ಹೇಳುತ್ತಾರೆ.

ಆಸ್ಪತ್ರೆಗಳಲ್ಲೂ ಕೂಡಾ

ನಗರದ ಕೆಲವು ಆಸ್ಪತ್ರೆಗಳಲ್ಲಿ 500, 1,000ರ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಇನ್ನು ಕೆಲವು ಕಡೆ ಸ್ವೀಕರಿಸುತ್ತಾರೆ. ಮೆಡಿಕಲ್‌ಗಳಲ್ಲೂ ಕೂಡ ಅದೇ ಸ್ಥಿತಿ ಇದೆ. 500 ರೂ. ಕೊಟ್ಟರೆ ಅಷ್ಟೇ ಮೊತ್ತದ ಔಷಧ ಸಾಮಗ್ರಿ ಖರೀದಿಸಬೇಕು. 500, 1,000 ರೂ. ಕೊಟ್ಟು ಸಾಮಗ್ರಿ ಖರೀದಿಸಿದ ಬಳಿಕ ‘ಚಿಲ್ಲರೆ’ ವಾಪಾಸ್ ಕೊಡಿ ಎಂದರೆ ಆಗದು ಎನ್ನುತ್ತಾರೆ, ನಗರದ ಮೆಡಿಕಲ್‌ವೊಂದರ ಸೇಲ್ಸ್‌ಮ್ಯಾನ್.

ಬಸ್... ರಿಕ್ಷಾ... ಪೇಪರ್ ಸ್ಟಾಲ್‌ಗಳಲ್ಲೂ

ಜಿಲ್ಲೆಯ ಸಾರಿಗೆಯ ಜೀವನಾಡಿಯಂತಿರುವ ಬಸ್-ರಿಕ್ಷಾಗಳಲ್ಲೂ ಕೂಡ ‘ಚಿಲ್ಲರೆ’ಯ ಸಮಸ್ಯೆ ಸಾಕಷ್ಟು ಕಾಡಿದೆ. ಹಲವು ಪ್ರಯಾಣಿಕರು ‘ನಾಳೆ ಕೊಡುತ್ತೇವೆ’ ಎಂದು ಹೇಳಿ ಪ್ರಯಾಣಿಸಿದರೆ, ಇನ್ನು ಕೆಲವರು ‘ಚಿಲ್ಲರೆ’ಗಾಗಿ ತಡಕಾಡಿದ್ದೂ ಇದೆ. ಪೇಪರ್ ಸ್ಟಾಲ್‌ಗಳಲ್ಲೂ ಕೂಡ ‘ಚಿಲ್ಲರೆ’ಯದ್ದೇ ಸಮಸ್ಯೆಯಾಗಿದೆ.

ಕಮಿಷನ್ ದಂಧೆ

ನಗರ ಮತ್ತು ಹೊರವಲಯದ ಕೆಲವು ಕಡೆ ಕಮಿಷನ್ ದಂಧೆ ಶುರುವಾಗಿದೆ. 500ಕ್ಕೆ 400 ರೂ. ಮತ್ತು 1,000ಕ್ಕೆ 800 ರೂ. ನೀಡುವ ವ್ಯವಹಾರ ಶುರುವಾಗಿದೆ. ಹಲವರು 500, 1,000ಕ್ಕೆ ಇನ್ನು ಬೆಲೆಯೇ ಇಲ್ಲ. ಬ್ಯಾಂಕ್‌ಗೆ ಕೊಟ್ಟರೆ ಅದರ ಬಗ್ಗೆ ದಾಖಲೆಕೊಡಬೇಕು. ಬ್ಯಾಂಕ್‌ನಲ್ಲಿ ಖಾತೆ ಇಲ್ಲದಿದ್ದರೆ ಹೊಸ ಖಾತೆ ಮಾಡಬೇಕು. ಎರಡು ದಿನದ ಬಳಿಕ ಬ್ಯಾಂಕ್‌ಗೆ ಕೊಡದಿದ್ದರೆ ಆ ನೋಟುಗಳು ಚಲಾವಣೆಗೆ ಬರುವುದಿಲ್ಲ ಎಂದು ಸುಳ್ಳು ಹೇಳಿ ಕಮಿಷನ್ ದಂಧೆ ನಡೆಸಿ ಅಮಾಯಕರನ್ನು ವಂಚಿಸಿದ ಪ್ರಕ್ರಿಯೆ ಕೂಡ ತೊಕ್ಕೊಟ್ಟು, ತಲಪಾಡಿ ಪ್ರದೇಶದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News