ಗ್ರಂಥಾಲಯ ಮಾಹಿತಿಯ ದಾಸ್ತಾನು ಕೊಠಡಿ: ಪ್ರೊ. ಲಿಯೊ ನೊರೊನ್ಹ

Update: 2016-11-09 13:37 GMT

ಪುತ್ತೂರು, ನ.9: ಗ್ರಂಥಾಲಯವು ಮಾನವನ ಸರ್ವತೋಮುಖ ವಿಕಸನಕ್ಕೆ ಅತಿ ಅಗತ್ಯವಿರುವ ಜ್ಞಾನ ಸಂಪತ್ತು ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಇಡಲಾದ ಒಂದು ದಾಸ್ತಾನು ಕೊಠಡಿಯಾಗಿದೆ. ಮಾಹಿತಿ ಮತ್ತು ಜ್ಞಾನ ಸಂಪಾದನೆಯ ದೃಷ್ಟಿಯಲ್ಲಿ ಪುಸ್ತಕಗಳು ಮಾನವನ ಉತ್ತಮ ಸಂಗಾತಿಯಾಗಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೊ ನೊರೊನ್ಹ ಹೇಳಿದರು.

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು ಪುತ್ತೂರಿನ ಜ್ಞಾನ ಗಂಗಾ ಪುಸ್ತಕ ಮಳಿಗೆಯ ಸಹಭಾಗಿತ್ವದೊಂದಿಗೆ ಎರಡು ದಿನಗಳ ಕಾಲ ಹಮ್ಮಿಕೊಂಡ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಈ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ನಮ್ಮ ಯುವ ಪೀಳಿಗೆಯಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗಿದೆ ಎಂದು ಅವರು ವಿಷಾದಿಸಿದರು.

ಗ್ರಂಥಾಲಯದ ಮಹತ್ವದ ಕುರಿತು ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ನಿಶಾ ಕೆ. ಮತ್ತು ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಜೋಯ್ಲಿನ್ ಎಂ. ರೋಡ್ರಿಗಸ್ ಮಾತನಾಡಿದರು.

ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ.ದಿನಕರ ರಾವ್, ಜ್ಞಾನಗಂಗಾ ಪುಸ್ತಕ ಮಳಿಗೆಯ ಶ್ಯಾಂ ಪ್ರಸಾದ್, ಗ್ರಂಥಪಾಲಕರಾದ ಮನೋಹರ್ ಎಸ್ . ಜಿ., ನೂತನ ಕುಮಾರಿ ಎಂ., ಗ್ರಂಥಾಲಯ ಸಲಹಾ ಸಮಿತಿ ಸದಸ್ಯ ಪ್ರವೀಣ್ ಪ್ರಕಾಶ್ ಡಿಸೋಜ ಉಪಸ್ಥಿತರಿದ್ದರು. ಅನುಷಾ ಕೆ.ಎಸ್. ಸ್ವಾಗತಿಸಿದರು. ಗ್ರಂಥಾಲಯ ಸಲಹಾ ಸಮಿತಿಯ ಸಂಚಾಲಕ ರಿತೇಶ್ ರೋಡ್ರಿಗಸ್ ವಂದಿಸಿದರು. ರೋಶನ್ ರೊಸಾರಿಯೊ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News