ಸಿಆರ್‌ಝಡ್ ಮರಳುಗಾರಿಕೆಗೆ ತಡೆ: ಹಸಿರು ಪೀಠದ ವಿಚಾರಣೆ ನ.23ಕ್ಕೆ

Update: 2016-11-09 17:32 GMT

ಉಡುಪಿ, ನ.9: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ವಿಧಿಸಿರುವ ತಡೆಯಾಜ್ಞೆಗೆ ಸಂಬಂಧಿಸಿದಂತೆ ಚೆನ್ನೈ ಹಸಿರುಪೀಠದಲ್ಲಿ ವಿಚಾರಣೆ ಬುಧವಾರ ಮುಂದುವ ರಿದಿದ್ದು, ರಾಜ್ಯ ಪರಿಸರ ಇಲಾಖೆಗೆ ಕೆಲವು ನಿರ್ದೇಶನಗಳನ್ನು ನೀಡಿ ಮುಂದಿನ ವಿಚಾರಣೆಯನ್ನು ನ.23ಕ್ಕೆ ಮುಂದೂಡಲಾಯಿತು.

ಮರಳುಗಾರಿಕೆಗೆ ಸಂಬಂಧಿಸಿದಂತೆ ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕ, ತಜ್ಞರಾದ ಪ್ರೊ.ಎಸ್.ಜಿ.ಮಯ್ಯ ಮತ್ತು ವೆಂಕಟ ರೆಡ್ಡಿಯವರು ಸಲ್ಲಿಸಿದ್ದ ವರದಿಯ ಮೂಲ ಪ್ರತಿಯನ್ನು ಮಂಡಿಸಲು ಹಸಿರುಪೀಠ ರಾಜ್ಯ ಪರಿಸರ ಇಲಾಖೆಗೆ ಸೂಚಿಸಿದೆ.

ಉಡುಪಿ ಜಿಲ್ಲಾ ಹೊಯಿಗೆ ಕಾರ್ಮಿಕರ ಸಂಘದ ಪರವಾಗಿ ವಾದ ಮಂಡಿಸಲಾಯಿತು. ಜಿಪಿಎಸ್, ನದಿಯಲ್ಲಿ ಮರಳು ದಾಸ್ತಾನು, ಮರಳು ದಿಬ್ಬಗಳ ಗುರುತಿಸುವಿಕೆ ಕುರಿತು ವಾದಗಳನ್ನು ಆಲಿಸಿದ ಪೀಠ, ಎಸ್.ಜಿ.ಮಯ್ಯ, ವೆಂಕಟರೆಡ್ಡಿ ಸ್ಥಳಕ್ಕೆ ಹೋಗಿ ವರದಿ ಮಂಡಿಸಿರುವ ಕುರಿತು ಎರಡು ವಾರಗಳಲ್ಲಿ ಸ್ಪಷ್ಟನೆ ನೀಡುವಂತೆ ಪರಿಸರ ಇಲಾಖೆಗೆ ಆದೇಶಿಸಿತು. ನ. 23ರೊಳಗೆ ಸ್ಪಷ್ಟನೆ ಕೊಡುವುದಾಗಿ ಸರಕಾರದ ಪರವಾಗಿ ತಿಳಿಸಲಾಯಿತು.

ಸಂಘದ ಪರವಾಗಿ ಲೋಕೇಶ್ ಮೆಂಡನ್, ಸತ್ಯರಾಜ್ ಬಿರ್ತಿ, ವಕೀಲರಾದ ರಮೇಶ್ ಹತ್ವಾರ್, ಶಿವರಾಜ ಹೆಗ್ಡೆ, ಉಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರಸನ್ನಕುಮಾರ್ ಶೆಟ್ಟಿ, ಸರಕಾರದ ಪರವಾಗಿ ಅಶೋಕ್ ದೇವರಾಜ್ ಹಾಜರಿದ್ದರು.

ಅಕ್ರಮ ಮರಳುಗಾರಿಕೆಯಿಂದ ತಾಲೂಕಿನ ಬೈಕಾಡಿ, ಹಾರಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಜನತೆಗೆ ಉಂಟಾದ ಅನೇಕ ಬಗೆಯ ಸಮಸ್ಯೆಗಳಿಗೆ ಸರಕಾರ, ಇಲಾಖೆಗಳಿಂದ ಯಾವುದೇ ಪರಿಹಾರ ಸಿಗದಾಗ ಬೈಕಾಡಿಯ ಉದಯ ಸುವರ್ಣ ನೇತೃತ್ವದಲ್ಲಿ ಕೆಲವು ಗ್ರಾಮಸ್ಥರು ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದು, ಕಳೆದ ಮೇ17ರಂದು ಹಸಿರು ಪೀಠ ಮರಳುಗಾರಿಕೆಗೆ ತಡೆಯಾಜ್ಞೆ ವಿಧಿಸಿತ್ತು. ಇದರಿಂದ ಜಿಲ್ಲೆಯಲ್ಲೀಗ ಮರಳಿನ ತೀವ್ರ ಸಮಸ್ಯೆ ಎದುರಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News