ಇತಿಹಾಸವನ್ನು ತಿರುಚುವ ಕೆಲಸ ಬೇಡ : ಸಚಿವ ರಮಾನಾಥ ರೈ

Update: 2016-11-10 09:58 GMT

ಮಂಗಳೂರು, ನ.10:ಸಾಮಾಜಿಕ ಸಾಮರಸ್ಯ, ಮುಖ್ಯ ಇತಿಹಾಸವನ್ನು ತಿರುಚುವ ಕೆಲಸ ಬೇಡ. ಸಾಮಜಿಕ ಸಾಮರಸ್ಯ ಮೂಡಿಸುವ ಕೆಲಸ ಟಿಪ್ಪು ಜಯಂತಿಯ ಸಂದರ್ಭದಲ್ಲಿ ನಡೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಟಿಪ್ಪು ತನ್ನ ಸೈದ್ಧಾಂತಿಕ ನಿಲುವಿನಿಂದ ಬ್ರಿಟಿಷರ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಡಿದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ. ಆತನ ಸೈನ್ಯದಲ್ಲಿ ಎಲ್ಲಾ ಜಾತಿ ಧರ್ಮದ ಜನರಿದ್ದರು ಎನ್ನುವುದು ಆತನ ಜಾತ್ಯತೀತ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಸರಕಾರ ಎಲ್ಲಾ ಐತಿಹಾಸಿಕ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುವಂತೆ ಟಿಪ್ಪು ಜಯಂತಿಯನ್ನು ಕಳೆದ ವರ್ಷದಿಂದ ಆಚರಿಸುತ್ತಾ ಬಂದಿದೆ. ಕೆಲವರು ಟಿಪ್ಪುವಿನ ಚರಿತ್ರೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರು ದೇಶ ದ್ರೋಹಿಗಳು. ಟಿಪ್ಪುವಿನ ಕಿರೀಟ ಧರಿಸಿ, ಕತ್ತಿ ಹಿಡಿದು ಹೊಗಳಿದವರು ಈಗ ವಿರೋಧಿಸುತ್ತಿದ್ದಾರೆ ಎಂದರೆ ಅಂತವರ ಮಾನಸಿಕ ಸ್ಥಿತಿ ಸರಿ ಇದೆಯೇ ಇಲ್ಲವೇ ಎಂದು ತಿಳಿದು ಕೊಳ್ಳಬೇಕಾಗಿದೆ. ಇತಿಹಾಸವನ್ನು ತಿದ್ದಲು ಹೋಗದೆ ಅದರಲ್ಲಿರುವ ಸಾಮರಸ್ಯದ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ರಮಾನಾಥ ರೈ ಕರೆ ನೀಡಿದರು.

ಟಿಪ್ಪು ಸುಲ್ತಾನ್ ಶೃಂಗೇರಿ ಮಠವನ್ನು ಮರಾಠದ ದಾಳಿಯಿಂದ ರಕ್ಷಣೆ ನೀಡಿದ. ನಂಜುಡೇಶ್ವರ ದೇವಸ್ಥಾನಕ್ಕೆ ರಕ್ಷಣೆ ನೀಡಿದ ಮಹಾನ್ ರಾಜ ಎಂಬ ಹೆಸರು ಗಳಿಸಿದ ವ್ಯಕ್ತಿ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಮಕ್ಕಳನ್ನು ಒತ್ತೆ ಇಟ್ಟು ಹೋರಾಟ ನಡೆಸಿದ ಮೈಸೂರಿನ ಹುಲಿ ಎಂದು ಶಾಸಕ ಮೊಯ್ದಿನ್ ಬಾವ ತಿಳಿಸಿದರು.

ದೇಶದ ರಾಷ್ಟ್ರೀಯ ನಾಯಕರ ಚರಿತ್ರೆಯನ್ನು ದಾಖಲಿಸುವ ಸಂದರ್ಭದಲ್ಲಿ ಆರೆಸ್ಸೆಸ್ ನಿಂದ 1970ರ ಲ್ಲಿ ಟಿಪ್ಪುವಿನ ಚರಿತ್ರೆಯನ್ನು ದಾಖಲಿಸುವ ಪುಸ್ತಕ ವನ್ನು ಪ್ರಕಟಿಸಲಾಗಿದೆ ಎಂದು ಮಂಗಳೂರು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಶಿವರಾಮ ಶೆಟ್ಟಿ ತಿಳಿಸಿದರು.

ಟಿಪ್ಪುವಿನ ಕಾಲದಲ್ಲಿ ರಾಜಪ್ರಭುತ್ವದ ಆಳ್ವಿಕೆ ಇತ್ತು .ಆತನ ಆಡಳಿತದ ಸಂದರ್ಭದಲ್ಲಿ ಮಾಡಿದ ಜನಸೇವೆಯ ಕೆಲಸ,ಸಮುದಾಯದ ಒಳಿತಿಗಾಗಿ ಮಾಡಿದ ಒಳ್ಳೆಯ ಕೆಲಸಗಳನ್ನು ಗುರುತಿಸಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯ ಮೂಲಕ ಮಾಡಬೇಕು ಹೊರತು ಟಿಪ್ಪುವಿನ ಹೆಸರಿನಲ್ಲಿ ಕೆಡುಕಿನ ಕೆಲಸಗಳಿಗೆ ಮುಂದಾಗುವುದು ಸರಿಯಲ್ಲ. ಲಾವಣಿಕಾರರು ಬ್ರಿಟೀಷರಿಗೆ ಸವಾಲಾಗಿದ್ದ ಹಲಗಲಿ ಬೇಡರ ಕಥೆಯನ್ನು ಹಾಡುವಂತೆ ಟಿಪ್ಪುವಿನ ಚರಿತ್ರೆಯನ್ನು ಹಾಡುತ್ತಾರೆ ಎಂದು ಶಿವರಾಮ ಶೆಟ್ಟಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಐವನ್ ಡಿಸೋಜ ಮಾತನಾಡಿ, ಟಿಪ್ಪುವಿನ ಹೆಸರಿನಲ್ಲಿ ಅಶಾಂತಿಯ ವಾತಾವರಣ ಮೂಡಿಸುವುದು, ಪ್ರಚೊದನೆ ನೀಡುವುದು ಸರಿಯಲ್ಲ. ದೇಶಕ್ಕಾಗಿ ಹೋರಾಟ ನಡೆಸಿ ಮಡಿದ ವ್ಯಕ್ತಿಗೆ ಗೌರವ ಸಲ್ಲಿಸುವುದು ಮುಖ್ಯ ಎಂದರು.

ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಮನಪಾ ಮೇಯರ್ ಹರಿನಾಥ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ದ.ಕ ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News