ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ

Update: 2016-11-13 15:03 GMT

ಮಂಗಳೂರು, ನ. 13: ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಯತ್ನ ಪ್ರಕರಣಗಳಿಗೆ ಸಂಬಂಧಿಸಿ ಠಾಣಾ ವಾಪ್ತಿಗಳಲ್ಲಿ ವಿಧಿಸಲಾಗಿದ್ದ ಸೆ.144 ನಿಷೇಧಾಜ್ಞೆಯನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ವಿಸ್ತರಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 13ರ ಮಧ್ಯಾಹ್ನ 2 ಗಂಟೆಯಿಂದ ನವೆಂಬರ್ 16ರ ರಾತ್ರಿ 10 ಗಂಟೆಯ ವರೆಗೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ.144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.

ನವೆಂಬರ್ 10ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೆಸೆಸ್ ಕಾರ್ಯಕರ್ತ ರಾಮ್‌ಮೋಹನ್ ಎಂಬವರ ಹತ್ಯೆಗೆ ಯತ್ನ, ನ. 12ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವಾಝ್ ಮತ್ತು ಸಮೀರ್ ಎಂಬವರಿಗೆ ಚೂರಿ ಇರಿತ ನಡೆದಿತ್ತು. ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನಚ್ಚರಿಕಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿಷೇಧಾಜ್ಞೆ ವಿಸ್ತರಿಸಲಾಗಿದೆ ಎಂದರು.

ನಿಷೇಧಾಜ್ಞೆಯ ಅವಧಿಯಲ್ಲಿ ಯಾವುದೇ ಪ್ರತಿಭಟನೆ, ಸಾರ್ವಜನಿಕ ಸಭೆ, ಸಮಾರಂಭಗಳು, ಜಾಥಾ, ಸಮಾವೇಶಗಳಿಗೆ ಅವಕಾಶ ನೀಡುವುದಿಲ್ಲ. ಜನರು ಗುಂಪು ಸೇರುವುದು, ಘೋಷಣೆಗಳನ್ನು ಕೂಗುವುದು, ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು ಮತ್ತಿತರ ಚಟುವಟಿಕೆಗಳಿಗೆ ಆಸ್ಪದ ಇಲ್ಲ. ಆದರೆ, ಮದುವೆ ಸಮಾರಂಭ, ಎಟಿಎಂಗಳಲ್ಲಿ ಸರದಿ ಸಾಲು ನಿಲ್ಲಲು ನಿಷೇಧಾಜ್ಞೆ ಅಡ್ಡಿಯಾಗದು. ಜನರಿಗೆ ತೊಂದರೆಯಾಗದಂತೆ ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ಶಾಂತಿಗೆ ಭಂಗ ತರುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವವರ ಮೇಲೆ ನಿಗಾ ಇಡಲಾಗುವುದು ಎಂದು ಕಮಿಷನರ್ ತಿಳಿಸಿದರು.

ನಿಷೇಧಾಜ್ಞೆ ಜಾರಿಯಲ್ಲಿರುವ ನಗರ ಪೊಲೀಸ್ ಕಮಿಷನರೇಟ್ವ್ಯಾಪ್ತಿಯಲ್ಲಿ ಹೊರ ಜಿಲ್ಲೆಗಳಿಂದ ಹೆಚ್ಚವರಿ 500 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್ಪಡೆಯ 14 ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ನಗರ ಸಶಸ್ತ್ರ ಮೀಸಲು ಪೊಲೀಸ್ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ಎಂ.ಚಂದ್ರಶೇಖರ್ ತಿಳಿಸಿದರು.

ವಿಶೇಷ ತಂಡ ರಚನೆ

ಚೂರಿ ಇರಿತದ ಮೂರು ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ಎರಡು ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರಕರಣಗಳಲ್ಲಿ ದುಷ್ಕರ್ಮಿಗಳ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಅವರು ಹೇಳಿದರು.

ಹಸ್ತಕ್ಷೇಪಕ್ಕೆ ಇಲ್ಲ

ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ದಾಳಿ ಪ್ರಕರಣಗಳ ತನಿಖೆಯಲ್ಲಿ ಸಚಿವರಾದ ಬಿ.ರಮಾನಾಥ ರೈ ಮತ್ತು ಯು.ಟಿ.ಖಾದರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಬಿಜೆಪಿ ಮುಖಂಡರ ಆರೋಪವನ್ನು ತಳ್ಳಿಹಾಕಿದ ಕಮಿಷನರ್, ಪ್ರಕರಣದಲ್ಲಿ ಪೊಲೀಸರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾರ ಹಸ್ತಕ್ಷೇಪಕ್ಕೂ ಅವಕಾಶವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ್ ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News