ನೋಟು ಅಮಾನ್ಯದಿಂದ ಸಹಕಾರಿ ಕ್ಷೇತ್ರಕ್ಕೆ ಭಾರೀ ಹೊಡೆತ: ಕಿಶನ್ ಹೆಗ್ಡೆ

Update: 2016-11-14 07:05 GMT

ಉಡುಪಿ, ನ.14: ಕೇಂದ್ರ ಸರಕಾರವು 500 ರೂ. ಹಾಗೂ 1000 ರೂ.ಗಳ ನೋಟುಗಳನ್ನು ಅಮಾನ್ಯಗೊಳಿಸಿರುವುದರಿಂದ ಸಹಕಾರಿ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಕಿನ್ನಿಮುಲ್ಕಿಯ ಉಡುಪಿ ತಾಲೂಕು ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿಂದು ಆರಂಭಗೊಂಡ 63ನೆ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನೋಟು ಅಮಾನ್ಯದಿಂದಾಗಿ ಸಹಕಾರಿ ಕ್ಷೇತ್ರಗಳು ತತ್ತರಿಸಿವೆ. ಸಹಕಾರಿ ಬ್ಯಾಂಕ್‌ಗಳಿಗೆ ನಗದು ಹರಿದು ಬರುತ್ತಿಲ್ಲ. ಗ್ರಾಹಕರು ಸಾಲ ಮರುಪಾವತಿ ಮಾಡಿದರೂ ಸ್ವೀಕರಿಸಲು ಕಷ್ಟಕರವಾಗಿದೆ ಎಂದರು.
ಆರ್‌ಬಿಐ ನೋಂದಾಯಿತ ಬ್ಯಾಂಕ್‌ಗಳಲ್ಲಿ ಮಾತ್ರ ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಅವಕಾಶ ಇರುವುದರಿಂದ ಸಹಕಾರಿ ಕ್ಷೇತ್ರಗಳು ಸಂಕಷ್ಟಕ್ಕೊಳಗಾಗಿವೆ. ಈ ಹಿನ್ನೆಲೆಯಲ್ಲಿ ಈ ನಿಯಾಮವಳಿಯಲ್ಲಿ ಸಹಕಾರಿ ಕ್ಷೇತ್ರಗಳಿಗೆ ರಿಯಾಯಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ತಾಲೂಕು ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾದವ ಬನ್ನಂಜೆ, ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಸಹಕಾರ ಸಂಘಗಳ ಉಡುಪಿ ಜಿಲ್ಲಾ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಲೆಕ್ಕ ಪರಿಶೋಧಕ ವಿಠಲ ಶೇರಿಗಾರ್, ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಎಂ. ಜೆ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News