ನೋಟು ರದ್ದತಿಯಿಂದ ಹೈರಾಣಾದ ಜನರಿಗೆ ಉಣಬಡಿಸಿದ ಮಂಗಳೂರಿನ ಸಿಖ್ಖರು!

Update: 2016-11-15 05:43 GMT

ಮಂಗಳೂರು, ನ.15: ಕಳೆದ ಶನಿವಾರ ತಮ್ಮ ಕಚೇರಿಗೆ ಹೊರಟಿದ್ದ ಮಂಗಳೂರು ನಿವಾಸಿ ಬಲವಿಂದರ್ ಸಿಂಗ್ ವಿರ್ಡಿ ನಗರದ ರೈಲು ನಿಲ್ದಾಣದಲ್ಲಿ ಜನರು ಆಹಾರ ಪಡೆಯಲು ನಗದು ಹಣದ ಕೊರತೆಯಿಂದ ಒದ್ದಾಡುತ್ತಿರುವುದನ್ನು ಗಮನಿಸಿದ್ದರು. ಹೆಚ್ಚಿನವರ ಬಳಿ ಇದ್ದಿದ್ದು 500 ಹಾಗೂ 1000 ರೂ. ನೋಟುಗಳು. ಅವುಗಳಿಗೆ ಯಾರೂ ಚಿಲ್ಲರೆ ಕೊಡಲು ತಯಾರಿರಲಿಲ್ಲ.

ನಗರದಲ್ಲಿ 2000ನೇ ಇಸವಿಯಿಂದ ವಾಸಿಸುತ್ತಿರುವ ಬಲವಿಂದರ್ ಇಲ್ಲಿ ಟ್ರಾನ್ಸ್ ಪೋರ್ಟ್ ಉದ್ಯಮ ನಡೆಸುತ್ತಿದ್ದಾರೆ. ಜನರ ಬವಣೆಯನ್ನು ನೋಡಿ ಉಚಿತ ಆಹಾರ ನೀಡಲು ನಿರ್ಧರಿಸಿದ ಅವರು ಮಂಗಳೂರಿನಲ್ಲಿರುವ ತಮ್ಮ ಸಮುದಾಯದ ಇತರರನ್ನು ಸಂಪರ್ಕಿಸಿದರು. ಸುಮಾರು 20 ಸ್ವಯಂಸೇವಕರು ಮುಂದೆ ಬಂದ ಪರಿಣಾಮ ಅವರು ನಗರದ ರೈಲ್ವೇ ನಿಲ್ದಾಣದಲ್ಲಿ ಲಂಗರ್ ಆಯೋಜಿಸಿದರು. (ಸಾಮೂಹಿಕವಾಗಿ ಅಡುಗೆ ಮಾಡಿ ಜನರಿಗೆ ಉಚಿತವಾಗಿ ಉಣಬಡಿಸುವುದು).
ಬಲವಿಂದರ್ ಅವರ ಪುತ್ರ ಪ್ರಭಜೋತ್ ಹೇಳುವಂತೆ ಸುಮಾರು 2,000 ಮಂದಿ ರವಿವಾರ ಉಚಿತ ಊಟ ಸವಿದಿದ್ದಾರೆ. ಬ್ಯಾಂಕ್ ಮೂಲಕವೇ ಎಲ್ಲಾ ಖರೀದಿಗಳಿಗೆ ಹಣ ಸಂದಾಯ ಮಾಡಲಾಯಿತು.

ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಅವರಿಂದ ಎಲ್ಲಾ ಅಗತ್ಯ ಅನುಮತಿ ಪಡೆದ ನಂತರವೂ ನಮ್ಮನ್ನು ರೈಲ್ವೇ ಪ್ರೊಟೆಕ್ಷನ್ ಅಧಿಕಾರಿಗಳು ಪ್ಲಾಟ್ ಫಾರ್ಮ್ ನ ಕೊನೆಯ ತುದಿಗೆ ಸ್ಥಳಾಂತರಗೊಳ್ಳಲು ಹೇಳಿದರು. ಅಧಿಕಾರಿಯೊಬ್ಬರು ತಮ್ಮ ತಂದೆಯೊಂದಿಗೆ ತುಂಬಾ ಒರಟಾಗಿ ನಡೆದುಕೊಂಡರು ಎಂದೂ ಅವರು ದೂರಿದರು.
ಕೊನೆಗೆ ಎಲ್ಲವೂ ಸುಗಮವಾಗಿ ನಡೆದು ಅಲ್ಲಿ ಬಂದವರಿಗೆಲ್ಲಾ ಆಹಾರ ಒದಗಿಸಲಾಯಿತು. ಮಂಗಳೂರಿನ ಸಿಖ್ಖ್ ಸಮುದಾಯದ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಿಂದಲೂ ಬಹಳಷ್ಟು ಪ್ರಶಂಸೆ ಕೇಳಿ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News