ಮುಸ್ಲಿಮರ ಕುರಿತ ತಪ್ಪುಕಲ್ಪನೆ ನೀಗಿಸಿ: ಅಮೀನುಲ್ ಹಸನ್

Update: 2016-11-16 13:17 GMT

ಉಡುಪಿ, ನ.16: ಮುಸ್ಲಿಮರ ಕುರಿತು ಸಾಮಾನ್ಯ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ನೀಗಿಸುವ ಕಾರ್ಯಆಗಬೇಕಾಗಿದೆ. ವಾಸ್ತವದಲ್ಲಿ ಮುಸ್ಲಿಮರಲ್ಲಿ ಕೇವಲ ಶೇ.0.5ರಷ್ಟು ವಿಚ್ಛೇದನ ಪ್ರಕರಣಗಳು ಕಂಡು ಬಂದರೆ, ಇತರರಲ್ಲಿ ಅದರ ಪ್ರಮಾಣ ಶೇ.3.75ರಷ್ಟಿದೆ. ಮುಸ್ಲಿಮರ ವೈಯಕ್ತಿಕ ಕಾನೂನು ನಿಜವಾದ ಸಮಸ್ಯೆಯೇ ಅಲ್ಲ. ಇದಕ್ಕಿಂತಲೂ ದೊಡ್ಡ ಮತ್ತು ಗಂಭೀರ ಸಮಸ್ಯೆಗಳು ನಮ್ಮ ದೇಶದಲ್ಲಿ ಸಾಕಷ್ಟು ಇವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕೇಂದ್ರ ಸಲಹಾ ಸಮಿತಿ ಸದಸ್ಯ ಅಮೀನುಲ್ ಹಸನ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಉಡುಪಿ ಜಾಮೀಯ ಮಸೀದಿಯಲ್ಲಿ ಇತ್ತೀಚೆಗೆ ನಡೆದ ಉಲಮಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಇಂದು ಕೆಲವೇ ಸಂಖ್ಯೆಯಲ್ಲಿರುವ ಕೋಮುವಾದಿಗಳು ತಮ್ಮ ಸಂಸ್ಕ್ರತಿಯನ್ನು ಇತರರ ಮೇಲೂ ಹೇರುವ ಷಡ್ಯಂತ್ರ ಮಾಡುತ್ತಿದ್ದಾರೆ. ಅದಕ್ಕಾಗಿ ಸಾಮಾನ್ಯ ಜನರಲ್ಲಿ ಸುಳ್ಳು ಮತ್ತು ಕಪೋಲಕಲ್ಪಿತ ವಿಷಯಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಇಸ್ಲಾಮಿನಲ್ಲಿ ಇರುವ ನೈಜ ಮತ್ತು ನೈಸರ್ಗಿಕ ನಿಯಮಗಳನ್ನು ತಿಳಿಸಬೇಕಾಗಿದೆ. ದಾಂಪತ್ಯ ಜೀವನ ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ ಇಸ್ಲಾಮಿನಲ್ಲಿ ಸರಳವಾಗಿ ಪ್ರತ್ಯೇಕಿಸುವ ನಿಯಮವಿದೆ. ಸಮಾಜದಲ್ಲಿರುವ ಮದ್ಯಪಾನ, ಅನೈತಿಕತೆ. ಆತ್ಮಹತ್ಯೆ, ಕೊಲೆಗಳಂತಹ ಅಪರಾಧಗಳ ಮುಲೊತ್ಪಾಟನೆಗಾಗಿ ನಾವು ಗಮನ ಕೊಡ ಬೇಕಾಗಿದೆ ಎಂದರು.

ಮೌಲಾನಾ ವಹೀದುದ್ದೀನ್ ಮದನಿ ಮಾತನಾಡಿ, ಕೇಂದ್ರ ಸರಕಾರವು ಜಾರಿ ಮಾಡಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಸಮುದಾಯದಲ್ಲಿ ಅದರ ವಾಸ್ತವಿಕತೆ ಮತ್ತು ಸಂರಕ್ಷಣೆಯ ಬಗ್ಗೆ ವಿದ್ವಾಂಸರು ಮಾರ್ಗದರ್ಶನ ಮಾಡಬೇಕಾಗಿದೆ. ಕೆಲವರು ಇಸ್ಲಾಮ್ ಕುರಿತ ತಪ್ಪು ಕಲ್ಪನೆ ಯಿಂದ ಮದುವೆ ಹಾಗೂ ತಲಾಕ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿ ದ್ದಾರೆ ಎಂದು ಹೇಳಿದರು.

ಮೌಲಾನ ಇಮ್ರಾನುಲ್ಲಾಹ್ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News