ಖಾಸಗಿ ಆಸ್ಪತ್ರೆಗಳಲ್ಲಿ ಅಮಾನ್ಯ ಕರೆನ್ಸಿ ಪಡೆಯಲು ಆಗ್ರಹ

Update: 2016-11-17 09:50 GMT

ಮಂಗಳೂರು, ನ.17: ಖಾಸಗಿ ಆಸ್ಪತ್ರೆಗಳಲ್ಲೂ ಅಮಾನ್ಯ 500 ಮತ್ತು 1000 ರೂ. ನೋಟುಗಳನ್ನು ಪಡೆಯವಂತೆ ಕೇಂದ್ರ ಸರಕಾರ ನಿರ್ದೇಶನ ನೀಡಬೇಕು. ಇಲ್ಲದಿದ್ದಲ್ಲಿ ರೋಗಿಗಳ ಸಂಬಂಕರು ದಂಗೆ ಏಳುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ.ವಿನಯರಾಜ್ ಹೇಳಿದರು.

ಸಾರ್ವಜನಿಕ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶದ ಸಹಕಾರಿ ಸೊಸೈಟಿಗಳಲ್ಲೂ 500 ಮತ್ತು 1000 ರೂ. ನೋಟುಗಳನ್ನು ವಿನಿಯಮ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ತಿಳಿಸಿದರು.

ಡಿ.31ರ ತನಕ ರಾಜ್ಯ ಸರಕಾರದ ಎಲ್ಲಾ ಕಚೇರಿಗಳಲ್ಲೂ  ನೋಟುಗಳನ್ನು ಸ್ವೀಕರಿಸುವ ಮೂಲಕ ಸಾರ್ವಜನಿಕರು ಬ್ಯಾಂಕುಗಳ ಸರದಿಯಲ್ಲಿ ನಿಂತು ವಿನಿಮಯ ಮಾಡಿಕೊಂಡು ತಂದು ಶುಲ್ಕ ಪಾವತಿಸುವ ಕಷ್ಟ ತಪ್ಪಿಸಬೇಕು. ಎಲ್ಲ ಎಟಿಎಂಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆದು, ಅದಕ್ಕೆ ಅಗತ್ಯಕ್ಕೆ ಪೂರಕವಾಗಿ ಹಣ ಪೂರೈಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಕಪ್ಪು ಹಣ, ಭ್ರಷ್ಟಾಚಾರ, ಕಾಳಸಂತೆ, ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಿಕೊಂಡು ಬಂದಿದೆ. 2014ರಲ್ಲಿ 500 ರೂ.ನ ಒಂದು ಸಿರೀಸ್‌ನ ನೋಟು ಬದಲಾವಣೆ ಮಾಡಲು ಹೇಳಿದ್ದಾಗ ಬಿಜೆಪಿ ಗದ್ದಲ ಎಬ್ಬಿಸಿತ್ತು. ಈಗಿನ ಕೇಂದ್ರ ಸರಕಾರ ಏಕಾಏಕಿ ನೋಟುಗಳನ್ನು ನಿಷೇಧಿಸಿ, ಪೂರಕ ಬದಲಿ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಉದ್ಯಮ, ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

ನೋಟುಗಳ ನಿಷೇಧ ಮತ್ತು ಹೊಸ ನೋಟುಗಳ ಮುದ್ರಣಕ್ಕೆ 10 ತಿಂಗಳಿಂದ ಪ್ರಯತ್ನ ನಡೆದಿದೆ ಎಂದು ಪ್ರಧಾನಿ ಹೇಳಿದರೂ, ಮತ್ತೆ 50 ದಿನಗಳ ಕಲಾವಕಾಶ ಕೇಳಿರುವುದು ಹಾಸ್ಯಾಸ್ಪದ.

ಕಾರ್ಪೊರೇಟರ್‌ಗಳಾದ ಅಪ್ಪಿ, ಕವಿತಾ ವಾಸು, ಪ್ರಕಾಶ್ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಝೀರ್ ಬಜಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬೆರಳಿಗೆ ಶಾಯಿಯಿಂದ ಗೌರವಕ್ಕೆ ಧಕ್ಕೆ!
ಇದೀಗ ಹಣ ಪಡೆದವರ ಬೆರಳಿಗೆ ಶಾಯಿ ಹಾಕುವ ಮೂಲಕ ಸಾರ್ವಜನಿಕರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಪ್ರಧಾನಿ ಮಾತಿನ ಮೋಡಿಯ ಜತೆಗೆ ಸುಳ್ಳನ್ನೂ, ಸರ್ವಾಧಿಕಾರಿ ನೀತಿಯನ್ನೂ ಪ್ರದರ್ಶಿಸುತ್ತಿದ್ದಾರೆ ಎಂದು ವಿನಯರಾಜ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News