ಅಮಾನವೀಯ ಕ್ರೂರ ಪದ್ಧತಿಗಳ ತಡೆಗೆ ಯತ್ನಿಸುವುದು ನಮ್ಮೆಲ್ಲರ ಕರ್ತವ್ಯ: ಡಾ.ಸುಮಿತ್ರಾ ಬಾಯಿ

Update: 2016-11-18 06:20 GMT

ಮಂಗಳೂರು, ನ.18: ಅಮಾನವೀಯ ಕ್ರೂರ ಪದ್ಧತಿಗಳನ್ನು ವಿರೊಧಿಸಲು, ತಡೆಗಟ್ಟಲು ದೃಢವಾಗಿ ಯತ್ನಿಸುವುದು ನಮ್ಮೆಲ್ಲರ ಕರ್ತವ್ಯವಾಗಲೇಬೇಕು ಎಂದು ಖ್ಯಾತ ವಿಮರ್ಶಕಿ ಡಾ.ಬಿ.ಎನ್.ಸುಮಿತ್ರಾ ಬಾಯಿ ಹೇಳಿದ್ದಾರೆ.
  ಮೂಡುಬಿದಿರೆ ಯ ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆ , ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ಆರಂಭಗೊಂಡ ‘ಆಳ್ವಾಸ್ ನುಡಿಸಿರಿ 2016’ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
    ಇಂಡಿಯಾದ ರಾಜಕೀಯ ವ್ಯವಸ್ಥೆಯ ಮೂಲಕ ಹುಟ್ಟಿಕೊಂಡ ಎರಡು ಪ್ರಮುಖ ಪಿಡುಗು ಓಟು ಬ್ಯಾಂಕ್ ಮತ್ತು ಕೋಮುವಾದ. ಇದರಿಂದ ಪುರಾತನವಾದ ಚಾರಿತ್ರಿಕವಾಗಿ ಸತ್ತು ಹೋದ, ಅನಾಗರಿಕವೆಂದು ಬಿಟ್ಟು ಬಂದಿರುವ ಸಂಪ್ರದಾಯಗಳ ದೆವ್ವ, ಭೂತಗಳನ್ನು ಮೇಲಕ್ಕೆಬ್ಬಿಸಿ ಮೈಮೇಲೆ ಬರಿಸಿಕೊಂಡು ಪ್ರಚುರಗೊಳಿಸಲು ದುಡಿಯುತ್ತಿವೆ. ಗೋರಿಯಲ್ಲಿದ್ದ ಆಚರಣೆಗಳು ದುರ್ಬಲರನ್ನು ಅನ್ಯಾಯ, ತಿರಸ್ಕಾರ, ದಮನಗಳಿಗೆ ಗುರಿಮಾಡಿಯೇ ತಮ್ಮ ಧಾರ್ಮಿಕ ಅಧಿಕಾರವನ್ನು ಸ್ಥಾಪಿಸಿಕೊಂಡಿದ್ದವು. ಈಗ ಮತ್ತೆ ಅವುಗಳಿಗೆ ಜೀವ ತುಂಬುವುದೆಂದರೆ ಮತ್ತದೇ ದುರ್ಬಲ ಜಾತಿ, ವರ್ಗ, ಲಿಂಗಗಳ ಮನುಷ್ಯರನ್ನೇ ನೊಗಕ್ಕೆ ಹೂಡಬೇಕಾಗಿರುತ್ತದೆ. ಈ ಕಾರಣದಿಂದ ಜಮೀನುದಾರಿ, ಪಾಳೇಗಾರಿಕೆ ವ್ಯವಸ್ಥೆ ಯಲ್ಲಿ ಚಲಾವಣೆಯಲ್ಲಿದ್ದ ಯಜಮಾನಶಕ್ತಿ ಗಳು ಪುನಃ ಬಲಿಷ್ಠವಾಗುತ್ತಾ ದಲಿತರು, ಸ್ತ್ರೀಯರು ಹಿಂದಿದ್ದ ದಮನಿತ ವ್ಯವಸ್ಥೆಗಳಿಗೆ ಪುನಃ ತಳ್ಳಲ್ಪಡುತ್ತಿದ್ದಾರೆ ಸುಮಿತ್ರಾ ಬಾಯಿ ಆತಂಕ ವ್ಯಕ್ತಪಡಿಸಿದರು.

ಮಹಿಳಾ ಸಾಹಿತ್ಯ ಎಂಬ ಪ್ರತ್ಯೇಕ ಪರಿಗಣನೆ ಬೇಕೆ..?:

   ಕನ್ನಡ ಸಾಹಿತ್ಯಕ್ಕೂ ನಾಡಿಗೂ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮಹಿಳೆಯರ ಪರವಾಗಿ ನಾನು ಇಲ್ಲಿ ಬಂದು ನಿಂತಿದ್ದೇನೆ ಎಂದು ಭಾಷಣ ಆರಂಭಿಸಿದ್ದ ಸುಮಿತ್ರಾ ಬಾಯಿ, ಮಹಿಳಾ ಸಾಹಿತ್ಯ ಒಂದು ಗಟ್ಟಿ ಆಯಾಮ ಕಂಡುಕೊಳ್ಳಲು ಆರಂಭಗೊಳ್ಳುತ್ತಿದ್ದಂತೆಯೇ ಮಹಿಳಾ ಸಾಹಿತ್ಯ ಎಂಬ ಪ್ರತ್ಯೇಕ ಪರಿಕಲ್ಪನೆಯ ಬಗ್ಗೆ ವಿರೋಧ, ಟೀಕೆಗಳು ಶುರುವಾದವು. ಮಹಿಳಾ ಸಾಹಿತ್ಯ ಎಂಬ ಪ್ರತ್ಯೇಕ ಪರಿಗಣನೆಗೆ ಮಹಿಳೆಯನ್ನು ಹಾಗೂ ಅವಳಿಗೆ ಹೊಂದಿಕೊಂಡ ಎಲ್ಲವನ್ನು ಕೀಳಾಗಿ ಕಂಡ ಮೂಲ ವ್ಯವಸ್ಥೆಯೇ ಮೂಲಕಾರಣ. ಈ ವ್ಯವಸ್ಥೆಯ ತಾರತಮ್ಯಗಳೆಲ್ಲಾ ನಾಶವಾದಾಗ ಇಂಥ ಪ್ರತ್ಯೇಕ ಪರಿಗಣನೆ ಕೂಡಾ ತಾನಾಗಿಯೇ ಇಲ್ಲವಾಗುತ್ತದೆ. ಮಹಿಳೆಯರ ಅನುಭವ ಕೇವಲ ಸ್ತ್ರೀಯರದ್ದು ಎಂದು ಭಾವಿಸುವುದು ತಪ್ಪಬೇಕು. ಮಹಿಳೆಯರು ಒಟ್ಟಾಗಿ ಮಾನವರನ್ನು ಕುರಿತೇ ಬರೆಯುತ್ತಾರೆಂದು ಅರ್ಥಮಾಡಿಕೊಳ್ಳಬಲ್ಲ ಸಂವೇದನಾ ವೈಶಾಲ್ಯ ನಮ್ಮಲ್ಲಿ ಬೆಳೆಯಬೇಕು ಎಂದುಅವರು ಆಶಯ ವ್ಯಕ್ತಪಡಿಸಿದರು.
  ಜಾಗತೀಕರಣದಿಂದ ಒಂದೆಡೆಗೆ ಹೀಗೆ ಸ್ತ್ರೀಯರ ಸಮಾನತೆ, ಸ್ವಾತಂತ್ರದ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದರೂ ಮತ್ತೊಂದಡೆ ಜೀವನೋಪಾಯಗಳು ವಿನಾಶದಿಂದ ಸ್ತ್ರೀಯರು ಬಡತನ ಹಾಗೂ ನಿರ್ಗತಿಕತೆಗೆ ತಳ್ಳಲ್ಪಟ್ಟ,ಊರುಬಿಟ್ಟು ಉದ್ಯೋಗ ಹುಡುಕುತ್ತಾ ದೇಶಾಂತರ ವಲಸೆ ಹೋಗುತ್ತಿದ್ದಾರೆ. ಸ್ತ್ರೀದೇಹ ವ್ಯಾಪಾರ ಸರಕಾಗುತ್ತಿದ್ದು, ಹೆಣ್ಣು ಗಳ ಮತ್ತು ಬಾಲಕೀಯರ ಟ್ರಾಫಿಕಿಂಗ್, ಬಲವಂತದಿಂದ ಅಥವಾ ಸ್ವೇಚ್ಛೇಯ ವೇಶ್ಯಾಗಾರಿಕೆ -ಟೂರಿಸಂ ಮೂಲದ ಲಂಪಟತನ, ಇಂದಿನ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ತೆಯ ದುರಾಚಾರ, ದೌರ್ಜನ್ಯ, ಅತ್ಯಾಚಾರಗಳ ಪ್ರಮಾಣಗಳು ತಾರಕಕ್ಕೇರಿವೆ. ಈ ಎಲ್ಲಾ ವಿಷಮಾವಸ್ಥೆಗಳ ವಿರುದ್ಧ ಸಂಘಟಿತ ಮಹಿಳಾ ಹೋರಾಟಗಳೂ ಇಂದು ಬಲಗೊಳ್ಳುತ್ತಿರುವುದು ಉತ್ತಮ ಬೆಳವಣಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News