ಬೋರ್‌ವೆಲ್ ಕೊರೆದರೆ ಕ್ರಿಮಿನಲ್ ಕೇಸ್ : ಗ್ರಾಪಂ ಅಧ್ಯಕ್ಷರ, ಪಿಡಿಒ, ವಿಎಗಳ ಸಭೆಯಲ್ಲಿ ಎಚ್ಚರಿಕೆ

Update: 2016-11-18 13:44 GMT

ಬಂಟ್ವಾಳ, ನ. 18: ನೀರಿನ ಮೂಲದಿಂದ 500 ಮೀಟರ್ ವ್ಯಾಪ್ತಿಯೊಳಗೆ ಬೋರ್‌ವೆಲ್ ಕೊರೆಯಲು ಅವಕಾಶವಿಲ್ಲ. ಅಕ್ರಮವಾಗಿ ಕೊಳವೆಬಾವಿ ನಿರ್ಮಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒ, ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊಳವೆ ಬಾವಿ ವಿಚಾರದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

ವಿಷಯ ಪ್ರಸ್ತಾಪಿಸಿದ ಕೊಳ್ನಾಡು ಗ್ರಾಪಂ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಜಿಲ್ಲೆಯಲ್ಲಿ ಬೋರ್‌ವೆಲ್ ಕೊರೆಯಲು ನಿಷೇಧವಿದ್ದರೂ ಕೆಲವೆಡೆ ಅಕ್ರಮವಾಗಿ ಕೊಳವೆ ಬಾವಿ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿಯೇ ಬೋರ್‌ವೆಲ್ ಏಜನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಹೊರತುಪಡಿಸಿ ಯಾವುದೇ ಬೋರ್‌ವೆಲ್ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಬಗ್ಗೆ ಪಿಡಿಒ, ವಿಎಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ತಹಶೀಲ್ದಾರ್ ಪ್ರತಿಕ್ರಿಯಿಸಿದರೆ, ಉಪಕಾರ್ಯದರ್ಶಿ ಉಮೇಶ್ ಪ್ರತಿಕ್ರಿಯಿಸಿ ಅಕ್ರಮವಾಗಿ ಯಾರು ಬೋರ್‌ವೆಲ್ ಕೊರೆದರೂ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಇಒ ಸಿಪ್ರಿಯನ್ ಮಿರಾಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News