ಬನ್ನಂಜೆ ಗೋವಿಂದಾಚಾರ್ಯರಿಗೆ ‘ಪಂಡಿತಾಚಾರ್ಯ’ ಬಿರುದು
ಉಡುಪಿ, ನ.17: ವಾಙ್ಮಯ ಪ್ರಪಂಚಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಿದ್ಯಾವಾಚಸ್ಪತಿ ಬನ್ನಂಜೆ ಆಚಾರ್ಯರನ್ನು ಇನ್ನು ಮುಂದೆ ಬನ್ನಂಜೆ ಗೋವಿಂದ ‘ಪಂಡಿತಾಚಾರ್ಯ’ರೆಂದು ಕರೆಯಲಾಗುವುದು ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಘೋಷಿಸಿದ್ದಾರೆ.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ಮಹರ್ಷಿ ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ಮಧ್ವಾಚಾರ್ಯರು ರಚಿಸಿದ ವ್ಯಾಖ್ಯಾನಗಳಿಗೆ ಅವರ ಶಿಷ್ಯ ತ್ರಿವಿಕ್ರಮ ಪಂಡಿತಾಚಾರ್ಯರು ಬರೆದ ‘ತತ್ವಪ್ರದೀಪ’, ಅದಕ್ಕೆ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ಬರೆದ ‘ತತ್ವಚಂದ್ರಿಕಾ’ ವ್ಯಾಖ್ಯಾನ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮಾತನಾಡುತಿದ್ದರು.
ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರಿಗೆ ‘ಪಂಡಿತಾಚಾರ್ಯ’ ಬಿರುದು ನೀಡಿ ಪೇಜಾವರ ಶ್ರೀಗಳು ಗೌವಿಸಿದರು. ಇಂಥಹ ಮಹಾನ್ ಸಾಧನೆ ಮಾಡಿರುವುದಕ್ಕೆ ಬನ್ನಂಜೆ ಆಚಾರ್ಯರ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಡಿ.ಪ್ರಹ್ಲಾದಾಚಾರ್ಯ, ತ್ರಿವಿಕ್ರಮ ಪಂಡಿತಾಚಾರ್ಯ ಪರಂಪರೆಯ ಕಾಸರಗೋಡಿನ ಶಿವಪ್ರಸಾದ್ ಹಾಗೂ ಮಾಯಿಪ್ಪಾಡಿ ಅರಸ ಇಮ್ಮಡಿ ಜಯಸಿಂಹನ ವಂಶಸ್ಥರಾದ ರಾಜ ಮಾರ್ತಾಂಡವರ್ಮ ಉಪಸ್ಥಿತರಿದ್ದರು.
ಮಠದ ದಿವಾನ ಎಂ.ರಘುರಾಮಾಚಾರ್ಯ ಉಪಸ್ಥಿತರಿದ್ದರು. ವಿದ್ವಾನ್ ರಾಮವಿಠಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.