ಸಿದ್ದರಾಮಯ್ಯರಿಂದ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆ

Update: 2016-11-19 13:26 GMT

ಮಂಗಳೂರು, ನ.19: ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿ(ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಜನ್ಮಶತಾಬ್ಧಿ ಭವನ)ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು.

ಬಳಿಕ ನೂತನ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗು ಗೃಹ ಸಚಿವ ಪರಮೇಶ್ವರ್ ಪ್ರಥಮ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸಕ್ಕೆ ಈ ಕ್ಷಣದಿಂದ ಇಲ್ಲಿಂದಲೇ ಪ್ರಾರಂಭಗೊಳ್ಳಲಿದೆ. ಪಕ್ಷದ ವಿವಿಧ ಘಟಕಗಳು ಕೂಡ ಇಲ್ಲೇ ಜತೆಗೂಡಿ ಕೆಲಸ ಮಾಡಲಿವೆ. ಕೇವಲ 11 ತಿಂಗಳಲ್ಲಿ ಈ ಸುಸಜ್ಜಿತ ಕಚೇರಿಯನ್ನು ನಿರ್ಮಿಸುವಲ್ಲಿ ಡಿಸಿಸಿ ಅಧ್ಯಕ್ಷ ರಮಾನಾಥ ರೈ ಹಾಗು ಮತ್ತಿತರರ ಶ್ರಮ ಅಪಾರ ಎಂದು ಹೇಳಿದರು.

ಕಚೇರಿ ಉದ್ಘಾಟನೆಯ ಹಿನ್ನೆಲೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಸಿ ಅಧ್ಯಕ್ಷ ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ನನ್ನ ಬಹುಕಾಲದ ಕನಸು ನನಸಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯ 20 ಅಂಶಗಳ ಕಾರ್ಯಕ್ರಮದ ಹೆಚ್ಚು ಪ್ರಯೋಜನದಾರರು ಈ ಜಿಲ್ಲೆಯವರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಚೇರಿಗೆ ಮಾಜಿ ಪ್ರಧಾನಿ ಇಂದಿರಾಗಾಂಧಿಯ ಹೆಸರನ್ನಿಟ್ಟಿರುವುದು ಸಾರ್ಥಕ ಎಂದರು.

ಜಿಲ್ಲೆಯಲ್ಲಿ 94ಸಿ ಮತ್ತು 94ಸಿಸಿ ಯೋಜನೆಯಡಿ 70 ಸಾವಿರ ಅರ್ಜಿಗಳು ಬಂದಿದೆ. ಅದನ್ನು ಪರಿಶೀಲಿಸಿ ಅರ್ಹರಿಗೆ ಪ್ರಯೋಜ ಸಿಗುವಂತೆ ಮಾಡಲಾಗುವುದು. ನಗರದ ನೆಹರೂ ಮೈದಾನವನ್ನು ಬಿಜೆಪಿಯವರು ಕೇಂದ್ರ ಮೈದಾನ ಎಂದೇ ಕರೆಯುತ್ತಾರೆ. ಆ ಹಿನ್ನೆಲೆಯಲ್ಲಿ ಇದೀಗ ಅಲ್ಲಿ ನೆಹರೂ ಪ್ರತಿಮೆ ನಿರ್ಮಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನ ಸಭೆ ಮತ್ತು ಲೋಕಸಭೆ ಕ್ಷೇತ್ರವನ್ನು ಗೆಲ್ಲಿಸಲು ಕಾರ್ಯಕರ್ತರು ಇಂದಿನಿಂದಲೇ ಪಣತೊಡಬೇಕು ಎಂದು ರೈ ಹೇಳಿದರು.

ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಕೆ.ಎಚ್.ಮುನಿಯಪ್ಪ, ಡಿಸಿಸಿ ಅಧ್ಯಕ್ಷ ಹಾಗು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವರಾದ ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯ್ದಿನ್ ಬಾವಾ, ಅಭಯಚಂದ್ರ ಜೈನ್, ಮಂಗಳೂರು ಮೇಯರ್ ಹರಿನಾಥ್, ಡಿಸಿಸಿ ಪ್ರಭಾರ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಪಕ್ಷದ ಮುಖಂಡರಾದ ಬಿ.ಎಲ್.ಶಂಕರ್, ತಾರಾದೇವಿ ಸಿದ್ದಾರ್ಥ, ಪ್ರೊ. ಬಿ.ಕೆ.ಚಂದ್ರಶೇಖರ್, ಜೆ.ಇಬ್ರಾಹೀಂ, ಮುಹಮ್ಮದ್ ಮಸೂದ್, ಜಿ.ಎ.ಬಾವಾ, ಬ್ಯಾರಿ ಅಕಾಡಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.

ನಾಡಗೀತೆಗೆ ತಡೆ

ಕಚೇರಿ ಉದ್ಘಾಟನೆಯ ಬಳಿಕ ಹಮ್ಮಿಕೊಂಡ ಈ ಸಭಾಕಾರ್ಯಕ್ರಮದಲ್ಲಿ ‘ನಾಡಗೀತೆ’ಗೆ ತಡೆಬಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಭೆಯಲ್ಲಿ ಇದ್ದುದು ವಿಶೇಷ. ಸಮಯದ ಅಭಾವದಿಂದ ‘ನಾಡಗೀತೆ’ಗೆ ಕತ್ತರಿ ಪ್ರಯೋಗಿಸಿದ ಕಾಂಗ್ರೆಸ್ ಮುಖಂಡರು ‘ಕಾಂಗ್ರೆಸ್ ಗೀತೆ’ಗೆ ಅವಕಾಶ ಮಾಡಿಕೊಟ್ಟು ಚರ್ಚೆಗೆ ಗ್ರಾಸ ಒದಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News