ಪುಸ್ತಕಗಳ ಮಳಿಗೆಗಳಿಗೂ ಎದುರಾದ ಚಿಲ್ಲರೆ ಅಭಾವ

Update: 2016-11-20 16:15 GMT

ಮೂಡಬಿದ್ರೆ, ನ. 20: ರವಿವಾರ ಸಮಾರೋಪಗೊಂಡ ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೂ 500 ಮತ್ತು 1,000 ಮುಖಬೆಲೆಯ ನೋಟುಗಳ ನಿಷೇಧವು ಪರಿಣಾಮ ಬೀರಿದೆ. ಹೊಸ 2,000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸಿದರೂ ಚಿಲ್ಲರೆ ಅಭಾವದಿಂದಾಗಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು.

‘ನಿರೀಕ್ಷಿತ ಮಟ್ಟದಲ್ಲಿ ಪುಸ್ತಕ ಮಾರಾಟವಾಗಿಲ್ಲ’

ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ ನಾನು ಕಳೆದ ನಾಲ್ಕು ವರ್ಷಗಳಿಂದ ಪುಸ್ತಕ ಮಳಿಗೆಯನ್ನು ಹಾಕಿದ್ದೇನೆ. ಆದರೆ, ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪುಸ್ತಕ ಮಾರಾಟ ತುಂಬಾ ಕಡಿಮೆಯಾಗಿದೆ. ಕೆಲವರು 500, 1000 ನೋಟುಗಳನ್ನು ಕೊಡುತ್ತಾರೆ. ನೋಟುಗಳ ಅಮಾನ್ಯದಿಂದಾಗಿ ಅವುಗಳನ್ನು ಸ್ವೀಕರಿಸುವ ಹಾಗಿಲ್ಲ. ಆದರೆ, ಕೆಲವರು 2,000 ನೋಟು ಕೊಟ್ಟರೂ ಅವರಿಗೆ ಚಿಲ್ಲರೆ ವಾಪಸು ಕೊಡುವುದು ಸಮಸ್ಯೆಯಾಗಿದೆ. ಇದರಿಂದಾಗಿ ಚಿಲ್ಲರೆ ಇಲ್ಲದೆ ಕೆಲವು ಗ್ರಾಹಕರು ವಾಪಸು ಹೋಗಿದ್ದಾರೆ ಎನ್ನುತ್ತಾರೆ ನುಡಿಸಿರಿಯಲ್ಲಿ ಮಳಿಗೆಯನ್ನು ಹೊಂದಿರುವ ತುಮಕೂರಿನ ಮನಮಿತ್ರ ಕ್ರಿಯೇಶನ್ಸ್ ಮತ್ತು ಪಬ್ಲಿಕೇಶನ್‌ನ ಕಿರಣ್ ಕೆ.ಟಿ.

ನಾಲ್ಕು ವರ್ಷಗಳಿಂದಲೂ ಎಲ್ಲಾ ಪ್ರಕಾಶನಗಳ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದೇನೆ. ಆದರೆ, ಈ ಬಾರಿಯಷ್ಟು ಕಡಿಮೆ ವ್ಯವಹಾರ ಕಳೆದ ವರ್ಷಗಳಲ್ಲಿ ಆಗಿಲ್ಲ. ಗ್ರಾಹಕ 2,000 ನೋಟು ಕೊಟ್ಟು 100 ರೂಪಾಯಿಯ ಪುಸ್ತಕ ಖರೀದಿಸಿದರೆ ಆತನಿಗೆ 19 ನೋಟುಗಳನ್ನು ಕೊಡಬೇಕು. ಚಿಲ್ಲರೆ ನೋಟುಗಳ ಅಭಾವದಿಂದಾಗಿ ಗ್ರಾಹಕರನ್ನು ಕಳೆದುಕೊಂಡಿದ್ದೇವೆ. 500 ಮತ್ತು 1,000 ರೂ.ಗಳ ನೋಟುಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ, ಆ ಹಣ ಡಿಪಾಸಿಟ್ ಮಾಡಲು ಬ್ಯಾಂಕಿನ ಮುಂದೆ 3 ತಾಸು ನಿಲ್ಲಬೇಕು. ಇದಕ್ಕಾಗಿ ಹಳೆಯ ನೋಟುಗಳನ್ನು ತೆಗೆದುಕೊಂಡಿಲ್ಲ ಎಂದವರು ತಿಳಿಸಿದ್ದಾರೆ.

‘ಚಿಲ್ಲರೆ ತಂದವರು ಪುಸ್ತಕ ಖರೀದಿಸಿದ್ದಾರೆ’

ಶುಕ್ರವಾರ ಮತ್ತು ಶನಿವಾರ ನಿರೀಕ್ಷಿಸಿದಂತೆ ಪುಸ್ತಕಗಳು ಮಾರಾಟವಾಗಿಲ್ಲ. ಸಮ್ಮೇಳನದ ಕೊನೆಯ ದಿನವಾದ ರವಿವಾರ ಹೆಚ್ಚಿನ ವ್ಯಾಪಾರ ಆಗಬಹುದು ಅಂದುಕೊಂಡಿದ್ದೆ. ಮಧ್ಯಾಹ್ನದವರೆಗೆ ನಿರೀಕ್ಷಿತ ಮಟ್ಟದಲ್ಲಿ ಪುಸ್ತಕಗಳು ಬಿಕರಿಯಾಗಿಲ್ಲ. ಸಾಹಿತಿಗಳಾದ ಜಯಂತ ಕಾಯ್ಕಿಣಿ ಮತ್ತು ತೇಜಸ್ವಿನಿಯವರ ಪುಸ್ತಗಳ ಸಹಿತ ಮಕ್ಕಳ ಪುಸ್ತಕಗಳಿಗೆ ಬೇಡಿಕೆಗಳು ಹೆಚ್ಚಿದ್ದವು. ಚಿಲ್ಲರೆ ತಂದವರು ಪುಸ್ತಕಗಳನ್ನು ಖರೀದಿಸಿದ್ದಾರೆ. 2,000 ಮುಖಬೆಲೆಯ ನೋಟು ತಂದವರಿಗೆ ಚಿಲ್ಲರೆ ಇರುವಾಗ ಕೊಟ್ಟಿದ್ದೇವೆ. ಇಲ್ಲದಿರುವಾಗ ವಾಪಸು ಕಳುಹಿಸಿದ್ದೇವೆ ಎನ್ನುತ್ತಾರೆ ಇನ್ನೋರ್ವ ಮಳಿಗೆಯ ಸುರೇಶ್ ಮಂಗಳೂರು.

‘ವ್ಯಾಪಾರ ಕಡಿಮೆ’

ಸಮ್ಮೇಳನದ ಮೊದಲ ದಿನ ಪುಸ್ತಕಗಳ ಮಾರಾಟ ಬಹಳ ವಿರಳವಾಗಿತ್ತು. ಶನಿವಾರ ಮತ್ತು ರವಿವಾರ ಪುಸ್ತಕಗಳು ಮಾರಾಟವಾಗಿದ್ದರೂ ನಿರೀಕ್ಷಿಸಿದಂತೆ ಮಾರಾಟವಾಗಿಲ್ಲ. ಮೂರನೆ ದಿನ ಹೆಚ್ಚಿನ ಪುಸ್ತಕಗಳು ಮಾರಾಟ ಆಗಬಹುದು ಎಂದು ಭಾವಿಸಿದ್ದೆ. ಆದರೆ, ಅದು ಹುಸಿಯಾಯಿತು. ಕಳೆದ ವರ್ಷಗಳಿಗೆ ಹೋಲಿಸಿದರೆ, ಮೂರು ದಿವಸಗಳ ಅವಧಿಯಲ್ಲೂ ನಿರೀಕ್ಷಿಸಿದಂತೆಪುಸ್ತಕಗಳು ಮಾರಾಟವಾಗಿಲ್ಲ. ಕಳೆದ ಮೂರು ದಿನಗಳಿಂದಲೂ ಚಿಲ್ಲರೆ ಸಮಸ್ಯೆ ಕಾಡಿದೆ ಎಂದು ಬುಕ್ ಸ್ಟಾಲ್‌ನ ಕಿರಣ್ ಮಂಗಳೂರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News