ಮಗುವಿನ ಅವಳಿ ಹೃದ್ರೋಗ ಸಮಸ್ಯೆಗೆ ಶಸ್ತ್ರಚಿಕಿತ್ಸಾ ರಹಿತ ಯಶಸ್ವಿ ಚಿಕಿತ್ಸೆ

Update: 2016-11-21 16:40 GMT

ಮಂಗಳೂರು, ನ.21: ಮೂರು ವರ್ಷದ ಬಾಲಕಿ ಶಾಲಿನಿ (ಹೆಸರು ಬದಲಾಯಿಸಲಾಗಿದೆ) ತನ್ನ ಸ್ನೇಹಿತರೊಂದಿಗೆ ಆಡುವಾಗ ಅತೀ ಹೆಚ್ಚಾಗಿ ದಣಿದುಕೊಳ್ಳುತ್ತಿದ್ದಳು ಹಾಗೂ ಆಕೆಯ ಎರಡೂ ಕಾಲುಗಳು ಯಾವುದೇ ಸಣ್ಣ ಚಟುವಟಿಕೆಯ ನಂತರ ಬಹಳಷ್ಟು ನೋಯುತ್ತಿದ್ದವು. ಈ ಮೇಲಿನ ಸಮಸ್ಯೆಯೊಂದಿಗೆ ಆಕೆಯನ್ನು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆತರಲಾಯಿತು.

ಮಕ್ಕಳ ಹೃದ್ರೋಗ ತಜ್ಞ ಡಾ.ಪ್ರೇಮ್ ಆಳ್ವ ಹೃದಯದ ಸ್ಕ್ಯಾನ್ ಮಾಡಿದಾಗ ಆಕೆಗೆ ಹುಟ್ಟಿನಿಂದ ಎರಡು ರೀತಿಯ ಹೃದ್ರೋಗ ಸಮಸ್ಯೆಗಳಿರುವುದನ್ನು ಪತ್ತೆ ಹಚ್ಚಲಾಯಿತು. ಸ್ಕಾನ್ ಮೂಲಕ ಆಕೆಯ ಹೃದಯ ಕೇಂದ್ರದಲ್ಲಿ ಒಂದು ಮಧ್ಯಮ ಗಾತ್ರದ ರಂಧ್ರವು ಮತ್ತು ದೇಹದ ಕೆಳಭಾಗಕ್ಕೆ ರಕ್ತವನ್ನು ಕೊಂಡೊಯ್ಯುವ ಮಹಾ ಅಪಧಮನಿಯ ಕೊಯಾಕ್ಟೇಷನ್ ಎಂದು ಕರೆಯಲ್ಪಡುವ ರಕ್ತನಾಳದಲ್ಲಿ ತಡೆಯುಂಟಾಗಿರುವ ಎರಡೂ ತೊಂದರೆಗಳನ್ನು ಪತ್ತೆಹಚ್ಚಲಾಯಿತು. ಈ ಸಮಸ್ಯೆಯಿಂದಾಗಿ ಮಗುವಿನ ಕಾಲುಗಳ ನಾಡಿಯು ಅತ್ಯಂತ ದುರ್ಬಲಗೊಂಡಿತ್ತು. ಈ ಅಪರೂಪದ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸಾ ರಹಿತ ಚಿಕಿತ್ಸೆಯನ್ನು ನೀಡಲು ನಿರ್ಧರಿಸಲಾಯಿತು. ಚಿಕಿತ್ಸೆಗಾಗಿ ಮಗುವನ್ನು ಕ್ಯಾತ್ ಲ್ಯಾಬಿಗೆ ಕರೆದೊಯ್ದು ರಂಧ್ರವನ್ನು ಬಟನ್ (ಸಾಧನದ) ಮೂಲಕ ಮುಚ್ಚಲಾಯಿತು ಮತ್ತು ಅದೇ ವೇಳೆ ತಡೆ ಉಂಟಾಗಿದ್ದ ರಕ್ತನಾಳವನ್ನು ಬಲೂನ್ ವ್ಯಾಪಕ ಹಿಗ್ಗುವಿಕೆ (ಕೊಯಾಕ್ಟೋಪ್ಲಾಸ್ಟಿ) ಬಳಸಿಕೊಂಡು ತೆರೆಯಲಾಯಿತು.

ಈ ಚಿಕಿತ್ಸಾ ವಿಧಾನವು ಯಾವುದೇ ತೊಡಕುಗಳಿಲ್ಲದೆ ಯಶಸ್ವಿಯಾಗಿ ನಡೆದಿದ್ದು, ಶಾಲಿನಿಯನ್ನು ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಮಗುವು ಪೂರ್ತಿಯಾಗಿ ಆರೋಗ್ಯಯುತವಾಗಿದೆ. ಮುಖ್ಯ ಅರಿವಳಿಕೆ ತಜ್ಞ ಡಾ.ಗುರುರಾಜ್ ತಂತ್ರಿ ಚಿಕಿತ್ಸೆಗೆ ಸಹಕರಿಸಿದರು. ಚಿಕಿತ್ಸೆಯನ್ನು ರಾಜ್ಯ ಸರಕಾರದ ಅನುದಾನಿತ ಯೋಜನೆಯಡಿ ಸಂಪೂರ್ಣ ಉಚಿತವಾಗಿ ನಡೆಸಲಾಯಿತು.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಪೂರ್ಣ ಪ್ರಮಾಣದ ಮಕ್ಕಳ ಹೃದ್ರೋಗ ವಿಭಾಗವನ್ನು ಮತ್ತು ಪೂರ್ಣ ಸಮಯದ ಮಕ್ಕಳ ಹೃದ್ರೋಗ ಸಲಹೆಗಾರರನ್ನು ಹೊಂದಿರುವ ದಕ್ಷಿಣ ಕನ್ನಡದ ಏಕೈಕ ಕೇಂದ್ರವಾಗಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News