ಮಂಗಳೂರು-ದಮ್ಮಾಮ್ ವಿಮಾನ ಕೊಚ್ಚಿನ್‌ನಲ್ಲಿ ತುರ್ತು ಭೂಸ್ಪರ್ಶ

Update: 2016-11-23 17:31 GMT

ಮಂಗಳೂರು, ನ. 23: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಹೊರಟ ಮಂಗಳೂರು-ದಮ್ಮಾಮ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ದೋಷದಿಂದಾಗಿ ಕೊಚ್ಚಿನ್‌ನಲ್ಲಿ ಇಳಿದು, ಮತ್ತೆ ಕೊಚ್ಚಿನ್‌ನಿಂದ ರಾತ್ರಿ 10:08ಕ್ಕೆ ದಮ್ಮಾಮ್‌ಗೆ ಪ್ರಯಾಣ ಬೆಳೆಸಿದೆ.

ಮಂಗಳೂರಿನಿಂದ ಸಂಜೆ 6:15ಕ್ಕೆ ಹೊರಟು 10:15ಕ್ಕೆ (ಸೌದಿ ಕಾಲಮಾನ 8:45)ಕ್ಕೆ ದಮ್ಮಾಮ್‌ನಲ್ಲಿ ಇಳಿಯಬೇಕಾಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ತುರ್ತಾಗಿ ಕೊಚ್ಚಿನ್‌ನಲ್ಲಿ ಇಳಿದಿದೆ. ವಿಮಾನದಲ್ಲಿ 9 ಮಕ್ಕಳ ಸಹಿತ 140 ಪ್ರಯಾಣಿಕರಿದ್ದರು. ತಾಂತ್ರಿಕ ತೊಂದರೆಯನ್ನು ಸರಿಪಡಿಸಿ ಎಲ್ಲ ಪ್ರಯಾಣಿಕರನ್ನು ಅದೇ ವಿಮಾನದಲ್ಲಿ ಕಳುಹಿಸಿಕೊಡಲಾಯಿತು. ಪ್ರಯಾಣಿಕರನ್ನು ಹೊತ್ತು ಭಾರತೀಯ ಕಾಲಮಾನ 10:10ಕ್ಕೆ ಕೊಚ್ಚಿನ್‌ನಿಂದ ಹೊರಟ ಏರ್ ಇಂಡಿಯಾವು ಸುಮಾರು ತಡರಾತ್ರಿ 2:10ಕ್ಕೆ (ಸೌದಿ ಕಾಲಮಾನ 11:40) ಕ್ಕೆ ದಮ್ಮಾಮ್ ತಲುಪಲಿದೆ ಎಂದು ಏರ್ ಇಂಡಿಯಾ ಸ್ಟೇಶನ್ ಮ್ಯಾನೇಜರ್ ನಾಗೇಶ್ ಎಸ್.ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ದಮ್ಮಾಮ್‌ಗೆ ಸಂಜೆ 6:15ಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಉಂಟಾದ ಇಂಜಿನ್ ಸಂಬಂಧಿತ ತಾಂತ್ರಿಕ ದೋಷದಿಂದಾಗಿ ಕೊಚ್ಚಿನ್‌ನಲ್ಲಿ ಇಳಿದಿತ್ತು ಮತ್ತು ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆಸಿ ಮತ್ತೆ ದಮ್ಮಾಮ್‌ಗೆ ಕಳುಹಿಸುವುದಾಗಿ ಎಂದು ಮೊದಲು ತಿಳಿಸಲಾಗಿತ್ತು. ಆದರೆ, ವಿಮಾನದ ಇಂಜಿನ್‌ನಲ್ಲಿ ದೋಷ ಕಂಡು ಬಾರದೇ, ಉಂಟಾಗಿದ್ದ ತಾಂತ್ರಿಕ ದೋಷವನ್ನು ಅಲ್ಲೇ ಸರಿಪಡಿಸಿ ಅದೇ ವಿಮಾನದಲ್ಲಿ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News