ಮಾಹಿತಿ ಹಕ್ಕು ಅರ್ಜಿ ವಿಲೇವಾರಿಯಲ್ಲಿ ಉಡುಪಿ ಮಾದರಿ: ರಾಜ್ಯ ಮಾಹಿತಿ ಆಯುಕ್ತ ಡಾ.ಸ್ವರೂಪ್

Update: 2016-11-25 11:49 GMT

ಉಡುಪಿ, ನ.25: ಪಾರದರ್ಶಕ ಆಡಳಿತಕ್ಕೆ ಉಡುಪಿ ಜಿಲ್ಲೆ ಉತ್ತಮ ಮಾದರಿಯಾಗಿದ್ದು, ಅಧಿಕಾರಿಗಳು ಜನಪರವಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಜಿಲ್ಲೆಯಿಂದ ಆರ್‌ಟಿಐ ಅಡಿಯಲ್ಲಿ ಕೇವಲ 6 ಅರ್ಜಿಗಳು ಬಾಕಿ ಇದ್ದು, ಅದನ್ನು ಇತ್ಯರ್ಥಪಡಿಸಲಾಗಿದೆ. ಹಾಗೂ ಇಲ್ಲಿ ಮೇಲ್ಮನವಿ ಪ್ರಾಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಸುಚೇತನ ಸ್ವರೂಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಉಡುಪಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಸಂಬಂಧ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಮಾದರಿಯನ್ನು ಕೇಂದ್ರ ಮಾಹಿತಿ ಹಕ್ಕು ಆಯೋಗದ ಕಾರ್ಯಾಗಾರದಲ್ಲೂ ಪ್ರಸ್ತಾಪಿಸಲಾಗುವುದು ಎಂದರು.

ನಿಜವಾಗಿ ಆರ್‌ಟಿಐ ಕಾಯ್ದೆ ಹಾಗೂ ಕಾರ್ಯಕರ್ತರ ಬಗ್ಗೆ ನೇತ್ಯಾತ್ಮಕ ಭಾವನೆಯಿದೆ. ಆದರೆ ಉಡುಪಿಯಲ್ಲಿ ಜನಪರವಾದ ಮಾಹಿತಿ ಹಕ್ಕು ಕಾಯಿದೆ ಅನುಷ್ಠಾನ ಉತ್ತಮವಾಗಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು. ಹಲವು ಸಂದರ್ಭಗಳಲ್ಲಿ ಮಾಹಿತಿ ಆಯೋಗ ಕುಂದುಕೊರತೆ ಆಯೋಗವಾಯಿತೇನೋ ಎಂಬಂತೆ ತಮಗೆ ಭಾಸವಾಗುತ್ತಿತ್ತು. ಪರಿಹಾರ, ದಂಡ, ಶಿಕ್ಷೆಯಾಗಬೇಕೆಂಬ ಭಾವಗಳೇ ಅರ್ಜಿದಾರರಲ್ಲಿರುತ್ತಿತ್ತು. ಆದರೆ ಜನರಿಗೆ ಸಮರ್ಪಕ ಮಾಹಿತಿ ನೀಡಿ, ಆಡಳಿತದಲ್ಲಿ ಪಾರದರ್ಶಕತೆಯನ್ನು ಉಡುಪಿ ಜಿಲ್ಲಾಡಳಿತ ಮೆರೆದಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಉಡುಪಿ ಜಿಪಂಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಹಾಗೂ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News