ತೆಗ್ಗು ಶಾಲೆ ಶಿಕ್ಷಕರ ವರ್ಗಾವಣೆ ವಿರೋಧಿಸಿ ಪೋಷಕರ ಪ್ರತಿಭಟನೆ

Update: 2016-11-25 14:48 GMT

ಪುತ್ತೂರು, ನ.25: ತಾಲೂಕಿನ ತೆಗ್ಗು ಹಿರಿಯ ಪ್ರಾಥಮಿಕ ಶಾಲೆಯಿಂದ ಏಕಕಾಲದಲ್ಲಿ ಇಬ್ಬರು ಶಿಕ್ಷಕರನ್ನು ವರ್ಗಾಯಿಸಿರುವುದನ್ನು ವಿರೋಧಿಸಿ ಶುಕ್ರವಾರ ಎಸ್‌ಡಿಎಂಸಿ ಮತ್ತು ಮಕ್ಕಳ ಪೋಷಕರು ದಿಢೀರ್ ಪ್ರತಿಭಟನೆ ನಡೆಸಿದ ಟನೆ ಶುಕ್ರವಾರ ತೆಗ್ಗು ಶಾಲೆಯಲ್ಲಿ ನಡೆಯಿತು.

ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಲೆಯ ಗೇಟನ್ನು ಮುಚ್ಚಿ ಯಾವ ವಿದ್ಯಾರ್ಥಿಯೂ ಶಾಲೆಗೆ ತೆರಳದಂತೆ ತಡೆದ ಪೋಷಕರು ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರನ್ನು ತಕ್ಷಣವೇ ಮತ್ತೆ ಶಾಲೆಗೆ ನಿಯೋಜಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಇಲಾಖೆಯ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಪೊಲೀಸರು ತಮ್ಮ ಜೀಪಿನಲ್ಲಿ ಕೂರಿಸಿ ಠಾಣೆಗೆ ಒಯ್ಯಲು ಯತ್ನಿಸಿದಾಗ ಪೊಲೀಸರು ಹಾಗೂ ಮಕ್ಕಳು ಪೊಲೀಸ್ ಜೀಪ್‌ಗೆ ತಡೆಯೊಡ್ಡಿ ಅಧ್ಯಕ್ಷರನ್ನು ಬಿಡುವಂತೆ ಒತ್ತಡ ಹೇರಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವಂತೆ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News