ನೋಟು ಅಮಾನ್ಯ ಹಿನ್ನೆಲೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಿ: ಅಖಿಲ ಭಾರತ ಕಥೊಲಿಕ್ ಒಕ್ಕೂಟ ಆಗ್ರಹ

Update: 2016-11-25 15:19 GMT

ಮಂಗಳೂರು, ನ.25: 1000 ಹಾಗೂ 500 ರೂ. ನೋಟುಗಳನ್ನು ಅಮಾನ್ಯಗೊಳಿಸಿರುವುದರಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಸಮಸ್ಯೆಯಿಂದ ಸಾವಿಗೀಡಾದವರ ಕುಟುಂಬಗಳಿಗೆ ಕೇಂದ್ರ ಸರಕಾರ ಪರಿಹಾರವನ್ನು ನೀಡಬೇಕು ಎಂದು ಅಖಿಲ ಭಾರತ ಕಥೊಲಿಕ್ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ವಕ್ತಾರ ಡಾ.ಜಾನ್ ದಯಾಳ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಕಥೊಲಿಕ್ ಯೂನಿಯನ್ ದೇಶದಲ್ಲಿನ ಕಪ್ಪು ಹಣ, ಭ್ರಷ್ಟಾಚಾರಕ್ಕೆ ವಿರುದ್ಧವಾಗಿದ್ದು ಈ ಪಿಡುಗನ್ನು ಹೋಗಲಾಡಿಸಬೇಕು ಎಂದು ಬಯಸುತ್ತದೆ. ಆದರೆ ಅದರ ಹೆಸರಿನಲ್ಲಿ ಯಾವುದೇ ಯೋಜನೆಗಳಿಲ್ಲದೆ, ಪರಿಣಾಮದ ಬಗ್ಗೆ ದೂರದೃಷ್ಟಿಯನ್ನು ಹೊಂದದೆ 1000 ಮತ್ತು 500 ರೂ.ಗಳ ನೋಟನ್ನು ಅಮಾನ್ಯ ಮಾಡಿದ ಪರಿಣಾಮ ಬಡವರು, ರೈತರು, ಕಾರ್ಮಿಕರು, ಅಶಕ್ತರು, ಸಹಕಾರಿ ಬ್ಯಾಂಕ್‌ಗಳ ಕಾರ್ಮಿಕರು ಮಧ್ಯಮ ವರ್ಗದವರು ತೊಂದರೆಗೀಡಾಗಿದ್ದಾರೆ ಎಂದು ಜಾನ್ ದಯಾಳ್ ತಿಳಿಸಿದ್ದಾರೆ.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ವಿವಾದಾಸ್ಪದ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಪ್ರಸ್ತಾಪ, ಶಿಕ್ಷಣವನ್ನು ಕೇಸರೀಕರಣ ಮಾಡಲು ಹೊರಟಿರುವುದು ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ನಿಯಂತ್ರಿಸಲು ಹೊಸ ಕಾನೂನು ರಚನೆ ಮಾಡಲು ಹೊರಟಿರುವುದು ಧಾರ್ಮಿಕ ಹಾಗೂ ನಿರ್ದಿಷ್ಟ ಸಮುದಾಯವನ್ನು ಕೇಂದ್ರೀಕರಿಸಿ ಮಾಡುತ್ತಿರುವ ಯೋಜನೆಯಾಗಿದೆ. ಕಥೋಲಿಕ್ ಸಮಿತಿ ಲಿಂಗ ಸಮಾನತೆಯನ್ನು ಸಾಧಿಸುವ ಕಾನೂನನ್ನು ವಿರೋಧಿಸುವುದಿಲ್ಲ. ಆದರೆ ಭಾರತದ ವೈವಿಧ್ಯತೆ ಇರುವುದು ಇಲ್ಲಿನ ಬಹುಧರ್ಮ ಸಂಸ್ಕೃತಿಯಿಂದ. ಈ ವೈವಿಧ್ಯತೆಗೆ ಹಾನಿಯಾಗುವ ನೀತಿಯನ್ನು ರೂಪಿಸುವುದು ಸರಿಯಲ್ಲ ಎಂದು ಜಾನ್ ದಯಾಳ್ ತಿಳಿಸಿದರು.

ದೇಶದ ಒರಿಸ್ಸಾ ಕಂದಮಾಲ್‌ನಲ್ಲಿ 2008ರಲ್ಲಿ ನಡೆದ ದೌರ್ಜನ್ಯದಲ್ಲಿ ಸಾಕಷ್ಟು ಕ್ರೈಸ್ತರ ಹತ್ಯೆ ನಡೆದು ಸಂತೃಸ್ತರಾದ ಕುಂಟುಂಬಗಳಿಗೆ ಇಂದಿಗೂ ಸೂಕ್ತ ನ್ಯಾಯ ದೊರಕಿಲ್ಲ. ಮಂಗಳೂರಿನಲ್ಲಿಯೂ ಕೋಮುಗಲಭೆಯ ಸಂದರ್ಭದಲ್ಲಿ ಸಾಕಷ್ಟು ಕ್ರೈಸ್ತ ಕುಟುಂಬಗಳಿಗೆ ತೊಂದರೆಯಾಗಿದೆ ಎಂದು ಜಾನ್ ದಯಾಳ್ ತಿಳಿಸಿದ್ದಾರೆ.

ದಲಿತ ಕ್ರೈಸ್ತರು ಸಂವಿಧಾನದತ್ತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ದಲಿತರಿಗೆ ಸಂವಿಧಾನದಲ್ಲಿ ನೀಡಲಾದ ಸೌಲಭ್ಯಗಳನ್ನು ನೀಡಬೇಕು ಎಂದು ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ ಎಂದು ಜಾನ್ ದಯಾಳ್ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಅಖಿಲ ಭಾರತ ಕಥೊಲಿಕ್ ಯೂನಿಯನ್‌ನ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ, ಉಪಾಧ್ಯಕ್ಷ ಇಲಿಯಾಸ್ ವಾಝ್, ಪ್ರಧಾನ ಕಾರ್ಯದರ್ಶಿ ಆ್ಯಂಟೊನಿ ಚಿನ್ನಪ್ಪ, ಖಜಾಂಜಿ ಅಲೆಕ್ಸಾಂಡರ್ ಆ್ಯಂಟೊನಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News