ಕಾಸರಗೋಡು: ತ್ರಿದಿನ ಬಹುಭಾಷಾ ನಾಟಕೋತ್ಸವ ಆರಂಭ

Update: 2016-11-26 10:28 GMT

ಕಾಸರಗೋಡು, ನ.26: ಮನುಷ್ಯನ ಮನೋವಿಕಾಸ ಮತ್ತು ಜ್ಞಾನಪ್ರಸರಣ ಪ್ರಕ್ರಿಯೆಗಳಿಗೆ ರಂಗಭೂಮಿ ಅಥವಾ ನಾಟಕಗಳು ಪೂರಕವಾಗಿದ್ದು, ಇವುಗಳ ಅನಿವಾರ್ಯತೆ ಇಂದು ಬಹಳಷ್ಟಿದೆ. ಕಲೆಯು ಮನುಷ್ಯನ ಬದುಕನ್ನು ಹಸನುಗೊಳಿಸುವುದರೊಂದಿಗೆ ಅವನಲ್ಲಿ ವೈಚಾರಿಕ ಮನೋಭಾವನೆಯನ್ನು, ಸಾಮಾಜಿಕ ಒಡಂಬಡಿಕೆಯನ್ನು ಮೂಡಿಸುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಎಲ್.ಬಿ.ಶೇಖ ಮಾಸ್ತರ್ ಅಭಿಪ್ರಾಯಪಟ್ಟರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯದ ಸಿ.ಬಿ.ಸಿ ಸಭಾಂಗಣದಲ್ಲಿ ಶುಕ್ರವಾರದಂದು ಆರಂಭಗೊಂಡ ತ್ರಿದಿನ ಬಹುಭಾಷಾ ನಾಟಕೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಗಡಿನಾಡು ಕಾಸರಗೋಡು ಹಲವು ಭಾಷೆ, ಕಲೆ, ಸಂಸ್ಕೃತಿಗಳ ನೆಲವಾದುದರಿಂದ ಇಲ್ಲಿನ ಜನರು ಸಾಂಸ್ಕೃತಿಕವಾಗಿ ಸಂಪನ್ನರಾಗಿದ್ದಾರೆ. ಆದುದರಿಂದ ಇಲ್ಲಿ ಇಂತಹ ಬಹುಭಾಷಾ ನಾಟಕೋತ್ಸವವನ್ನು ಆಯೋಜಿಸುವುದು ಹೆಚ್ಚು ಔಚಿತ್ಯೂರ್ಣವೂ ಅರ್ಥಪೂರ್ಣವೂ ಆಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ,ಕಲೆಗೆ ಭಾಷೆಯ ತೊಡಕಿಲ್ಲ. ಅದು ಎಲ್ಲರನ್ನೂ ಮಾತನಾಡಿಸಬಲ್ಲ ಶಕ್ತಿಯನ್ನು ಹೊಂದಿದೆ. ನಾಟಕಗಳು ಬದುಕಿನ
ಪ್ರತಿಬಿಂಬಗಳಾಗಿ ತೆರೆದುಕೊಳ್ಳವುದಲ್ಲದೆ, ಜೀವನವನ್ನು ತಿದ್ದುವ ಹಾಗೂ ಒರೆಗೆ ಹಚ್ಚುವ ಕೆಲಸವನ್ನು ಮಾಡುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಮಾತನಾಡಿ, ಕಾಸರಗೋಡಿನಲ್ಲಿ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವ ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಲಯಾಳ ಕಾದಂಬರಿಕಾರ ಪಿ.ವಿ.ಕೆ. ಪನೆಯಾಲ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಅಧ್ಯಕ್ಷ ಎಸ್. ವಿ.ಭಟ್, ರಂಗ ಕಲಾವಿದ ಟಿ.ವಿ.ಗಂಗಾಧರನ್, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ, ಕರ್ನಾಟಕ ಸಾಹಿತ್ಯ ಬ್ಯಾರಿ ಅಕಾಡಮಿಯ ಸದಸ್ಯೆ ಆಯಿಷಾ ಎ.
ಎ. ಪೆರ್ಲ ಮುಂತಾದವರು ಮಾತನಾಡಿದರು.

ಜಗನ್ನಾಥ ಶೆಟ್ಟಿ ಕುಂಬಳೆ, ಮಂಜುನಾಥ ಆರಾಧ್ಯ, ದೇವರಾಜ್, ವಿಠಲ ಕೊಪ್ಪದ ಮೊದಲಾದವರು ಉಪಸ್ಥಿತರಿದ್ದರು.

ಕನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ದಾವಣಗೆರೆಯ ಎಚ್. ಷಡಕ್ಷರಪ್ಪ ಹೊಸಮನೆ, ಶಿವಮೊಗ್ಗ ಜಿಲ್ಲೆಯ ಅನ್ನಪೂರ್ಣ ಸಾಗರ್, ಬಳ್ಳಾರಿಯ ಎ ವರಲಕ್ಷ್ಮೀ ಹಾಗೂ ಸಮಾರಂಭದ ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಚಿನ್ಮಯಾ ವಿದ್ಯಾಲಯದ ಪ್ರಾಂಶುಪಾಲ ಪುಷ್ಪರಾಜ್ ಸ್ವಾಗತಿಸಿದರು. ಕರ್ನಾಟಕ ನಾಟಕ ಅಕಾಡಮಿಯ ಸದಸ್ಯ ಸಂಚಾಲಕ ಉಮೇಶ ಎಂ.ಸಾಲ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಸರಗೋಡು ಸರಕಾರಿ ಕಾಲೇಜು ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಕುಂಬಳೆ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಚಿನ್ಮಯ ವಿದ್ಯಾಲಯದ ಸುಮಾರು ನೂರೈವತ್ತು ವಿದ್ಯಾರ್ಥಿಗಳಿಂದ ಸಿಂಪನಿ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು. ಅಧ್ಯಾಪಿಕೆಯರಾದ ಸುಶ್ಮಿತಾ, ಆರ್ಶಜ, ಜಾಹ್ನವಿ ವಿದ್ಯಾರ್ಥಿಗಳಿಗೆಮಾರ್ಗದರ್ಶನ ನೀಡಿದ್ದರು.

ಬಳಿಕ ನಂಜುಡೇ ಗೌಡ ನಿರ್ದೇಶನದ‘ಸೂರ್ಯಾಸ್ತಮಾನದಿಂದ ಸೂರ್ಯೋದಯದವರೆಗೆ’ ನಾಟಕಪ್ರದರ್ಶನಗೊಂಡಿತು.
ನ.27ರಂದು ಬಹುಭಾಷಾ ನಾಟಕೋತ್ಸವ ಸಮಾರೋಪಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News