ಗ್ರಾಮದ ಅಭಿವೃದ್ಧಿಗೆ ಅಂಬ್ಲಮೊಗರು ಗ್ರಾ.ಪಂ.ನಿಂದ ಕ್ರಾಂತಿಕಾರಿ ಹೆಜ್ಜೆ: ಸಚಿವ ಯು.ಟಿ.ಖಾದರ್

Update: 2016-11-28 10:41 GMT

ಉಳ್ಳಾಲ, ನ.28: ಅಂಬ್ಲಮೊಗರು ಗ್ರಾಮ ಪಂಚಾಯತ್ ಗ್ರಾಮದ  ಅಭಿವೃದ್ದಿಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿರುವ ಅಂಬ್ಲಮೊಗರು ಗ್ರಾಮ ಪಂಚಾಯತ್ ಪ್ರತೀ ಮನೆಯಲ್ಲಿ ಅಡುಗೆ ಅನಿಲ, ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿದ್ದು ದೇಶದಲ್ಲೇ ಮಾದರಿ ಎಂದು ಆಹಾರ ಸಚಿವ ಯು.ಟಿ.ಖಾದರ್ ಶ್ಲಾಘಿಸಿದರು. 

ಕಾಂಗ್ರೆಸ್ ಅಂಬ್ಲಮೊಗರು ಗ್ರಾಮ ಸಮಿತಿ ಹಾಗೂ ಯುವಕಾಂಗ್ರೆಸ್ ವತಿಯಿಂದ ಭಾನುವಾರ ಮದಕ ಜಂಕ್ಷನ್ ನಲ್ಲಿ ನಡೆದ ಯುವ ಸಮಾವೇಶ ಮತ್ತು ನಮ್ಮ ಗ್ರಾಮ ನಮ್ಮ ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ, ಯು.ಟಿ.ಫರೀದ್ ಫೌಂಡೇಶನ್ ವತಿಯಿಂದ ಅಡುಗೆ ಅನಿಲ ವಿತರಿಸಿ ಮಾತನಾಡಿದರು. 

ಎರಡು ವರ್ಷಗಳ ಹಿಂದೆ ಪಂಚಾಯತ್ ಉಪಾಧ್ಯಕ್ಷ ರಫೀಕ್ ನೇತೃತ್ವದಲ್ಲಿ ಗ್ರಾಮದಲ್ಲಿ ಸರ್ವೇ ನಡೆಸಿ 20 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದರೆ, ಇದೀಗ ಮತ್ತೊಮ್ಮೆ ಸರ್ವೇ ನಡೆಸಿ ಬಡವರಿಗೆ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಕಂದಾಯ ಅದಾಲತ್ ಮುಖಾಂತರ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಜನ ಪಂಚಾಯತ್ ಗೆ ಬರುವ ಬದಲು ಪಂಚಾಯತ್ ನಿಂದಲೇ ಜನರ ಬಳಿ ಹೋಗುವ ಕಾರ್ಯಕ್ರಮ ನಡೆದಿದೆ. ವಿದ್ಯುತ್ರಹಿತ ಮನೆ, ಹೊಗೆರಹಿತ ಮನೆ ಅಂಬ್ಲಮೊಗರುವಿನಲ್ಲಿ ಮಾತ್ರವಿದೆ ಎಂದರು. 

ಕೇಂದ್ರ ಸರಕಾರ ಸೀಮೆಎಣ್ಣೆ ರಹಿತ ಮನೆ ನಿರ್ಮಾಣ ನಿಟ್ಟಿನಲ್ಲಿ `ಉಜ್ವಲ' ಯೋಜನೆ ಜಾರಿಗೆ ತಂದಿದೆ. ಆದರೆ ಯೋಜನೆಯಡಿ ಕೇವಲ ಅನಿಲ ಪೈಪ್ ಮತ್ತು ರೆಗ್ಯುಲೇಟರ್ ಮಾತ್ರ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಅನಿಲ ಸಿಲಿಂಡರ್, ಸ್ಟೌ ನೀಡುವ ಯೋಜನೆ ಜಾರಿಗೆ ತಂದಿದೆ. ಅಂಬ್ಲಮೊಗರುವಿನಲ್ಲಿ ಎಲ್ಲಾ ಪರಿಕರ ನೀಡಲಾಗಿದೆ ಎಂದು ತಿಳಿಸಿದರು. 

ಕಾಂಗ್ರೆಸ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಡಾ.ರಾಜಲಕ್ಷ್ಮಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಸುರೇಖ ಚಂದ್ರಹಾಸ್, ಜಿಲ್ಲಾ ಪಂಚಾಯತ್ ಸದಸ್ಯೆ ರಶೀದಾ ಬಾನು, ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ ಮೊಹಮ್ಮದ್ ರಫೀಕ್, ಸಂತೋಷ್ ಕುಮಾರ್ ಶೆಟ್ಟಿ, ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಪದ್ಮನಾಭ ನರಿಂಗಾನ, ಸುರೇಶ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಅಂಬ್ಲಮೊಗರು ಪ್ರೌಢಶಾಲೆಯ ಎಸೆಸೆಲ್ಸಿ ಪ್ರಥಮ ಬ್ಯಾಚ್ ನಲ್ಲಿ ಉತ್ತೀರ್ಣರಾದ 20 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾಮದಲ್ಲಿರುವ 125 ಬಡ ಕುಟುಂಬಕ್ಕೆ ಯು.ಟಿ.ಫರೀದ್ ಫೌಂಡೇಶನ್ ವತಿಯಿಂದ ಅಡುಗೆ ಅನಿಲ ವಿತರಿಸಲಾಯಿತು. ದಿನೇಶ್ ಕುಂಪಲ, ಶಶಿಪ್ರಭಾ ಶೆಟ್ಟಿ, ಸದಾಶಿವ ಉಳ್ಳಾಲ್, ಎನ್.ಎಸ್.ಕರೀಂ, ಚಂದ್ರಹಾಸ ಕರ್ಕೇರ, ಮುಹಮ್ಮದ್ ಮೋನು ಮೊದಲಾದವರನ್ನು ಸನ್ಮಾನಿಸಲಾಯಿತು. 

ಸುದರ್ಶನ್ ಶೆಟ್ಟಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. 
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News