ಮರಳು ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು: ಪೇಜಾವರಶ್ರೀ

Update: 2016-11-28 15:04 GMT

ಉಡುಪಿ, ನ.28: ಪರಿಸರಕ್ಕೂ ಹಾನಿಯಾಗದಂತೆ, ಜನರಿಗೂ ಸಮಸ್ಯೆ, ತೊಂದರೆಗಳು ಎದುರಾಗದಂತೆ ಜಿಲ್ಲೆಯ ಮರಳು ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕಾಗಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಮರಳು ತೆಗೆಯಲು ವಿಧಿಸಿರುವ ನಿಷೇಧದಿಂದ ಜಿಲ್ಲೆಯ ಮರಳು ಕಾರ್ಮಿಕರ ಬದುಕು-ಬವಣೆಯ ಕುರಿತು ಅನ್ಸಾರ್ ಅಹ್ಮದ್ ಅವರು ತಮ್ಮ ತಾನಿಯಾ ಕ್ರಿಯೇಷನ್ಸ್ ಮೂಲಕ ನಿರ್ಮಿಸಿದ ‘ಮರಳು... ಕಾರ್ಮಿಕರ ಜೀವನಗಾಥೆ’ ಎಂಬ ಕನ್ನಡ ಕಿರುಚಿತ್ರದ ಸಿಡಿಯನ್ನು ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಮರಳನ್ನೇ ನಂಬಿರುವ ಕಾರ್ಮಿಕರ ಸಂಕಷ್ಟಗಳ ಕುರಿತು ಬೆಳಕು ಚೆಲ್ಲುವ ಈ ಚಿತ್ರದಿಂದಲಾದರೂ ಒಳ್ಳೆಯ ಪರಿಣಾಮ ಉಂಟಾಗಿ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವಂತಾಗಲಿ ಎಂದವರು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಮಾತನಾಡಿ, ಕಳೆದ ಆರು ತಿಂಗಳನಿಂದ ಜಿಲ್ಲೆಯನ್ನು ಬಾಧಿಸುತ್ತಿರುವ ಮರಳಿನ ಸಮಸ್ಯೆಯ ತೀವ್ರತೆ ಹಾಗೂ ಅದನ್ನೇ ನಂಬಿರುವ ಕಾರ್ಮಿಕರ ಕುಟುಂಬ ಎದುರಿಸುತ್ತಿರುವ ಸಂಕಟವನ್ನು ಸಮಾಜ ಹಾಗೂ ಸರಕಾರದ ಮುಂದಿಟ್ಟು ಅವುಗಳ ಗಮನ ಸೆಳೆಯಲು ಈ ಚಿತ್ರ ನಿರ್ಮಿಸಿರುವುದಾಗಿ ತಿಳಿಸಿದರು.

ಕಟಪಾಡಿ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ಎಂ.ಜಿ.ನಾಗೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಮೃತ ಶೆಣೈ, ಪತ್ರಕರ್ತ ರೂಪೇಶ್ ಕಲ್ಮಾಡಿ, ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಚಿತ್ತರಂಜನ್‌ದಾಸ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರು ಉಪಸ್ಥಿತರಿದ್ದರು.

ಪ್ರಕಾಶ್ ಸುವರ್ಣ ಕಟಪಾಡಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News