ಪ್ರವೀಣ್ ಪೂಜಾರಿ ಹಂತಕರಿಂದ ಸಹಕೈದಿಗಳಿಗೆ ಹಲ್ಲೆ

Update: 2016-11-28 16:13 GMT

ಹಿರಿಯಡ್ಕ, ನ.28: ಹಿರಿಯಡ್ಕ ಜೈಲಿನಲ್ಲಿ ನ.27ರಂದು ಬೆಳಗ್ಗೆ 9:30ರ ಸುಮಾರಿಗೆ ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ ವಿಚಾರಣಾ ಧೀನ ಕೈದಿಗಳು ಅಕ್ರಮ ದನ ಸಾಗಾಟ ಪ್ರಕರಣದಡಿ ಬಂಧಿತರಾಗಿರುವ ಸಹಕೈದಿಗಳಿಬ್ಬರಿಗೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಹಲ್ಲೆಗೆ ಒಳಗಾದವರನ್ನು ಕುಂದಾಪುರದ ಇರ್ಷಾದ್ ಹಾಗೂ ಕಾರ್ಕಳ ಬಂಗ್ಲೆಗುಡ್ಡೆಯ ರಫೀಕ್ ಎಂದು ಗುರುತಿಸಲಾಗಿದೆ. ಇವರು ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯಂಗಡಿ ಸಮೀಪ ನ.26ರಂದು ಬೆಳಗಿನ ಜಾವ ಸಿಫ್ಟ್ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟದ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್‌ಗಳಿಗೆ ಹಲ್ಲೆ ನಡೆಸಲು ಯತ್ನಿಸಿ ಕಾರು ಬಿಟ್ಟು ಪರಾರಿಯಾಗಿದ್ದರು. ಬಳಿಕ ಪೊಲೀಸರು ಅವರಿಬ್ಬರನ್ನು ಅದೇ ದಿನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಂಗ ಬಂಧನಕ್ಕೆ ಒಳಗಾದ ಅವರನ್ನು ನ.26 ರಂದು ರಾತ್ರಿ 11ಗಂಟೆ ಸುಮಾರಿಗೆ ಪೊಲೀಸರು ಹಿರಿಯಡಕ ಜೈಲಿನಲ್ಲಿ ಕರೆತಂದು ಬಿಟ್ಟಿದ್ದರು. ನ.27ರಂದು ಇರ್ಷಾದ್ ಮತ್ತು ರಫೀಕ್ ತಾವು ಇದ್ದ ಒಂದನೆ ಬ್ಯಾರಕ್‌ನಿಂದ ತಿಂಡಿ ತಿನ್ನಲು ಅಡುಗೆ ಕೋಣೆ ಕಡೆಗೆ ಹೋಗುವಾಗ ಅದೇ ಕಾರಾಗೃಹದಲ್ಲಿ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ 21 ಮಂದಿ ವಿಚಾರಣಾಧೀನ ಕೈದಿಗಳು ಅಡ್ಡಗಟ್ಟಿ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆಯೊಡ್ಡಿದ್ದಾರೆ.

ಬಳಿಕ ಜೈಲ್ ಸಿಬ್ಬಂದಿಗಳು ಅವರನ್ನು ಬಿಡಿಸಿ ಪ್ರತ್ಯೇಕ ಬ್ಯಾರಕ್‌ನಲ್ಲಿ ಇರಿಸಿ ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರಿಯಡ್ಕ ಪೊಲೀಸರು ಇರ್ಷಾದ್ ನೀಡಿದ ದೂರಿನಂತೆ ಸುದೀಪ್ ಶೆಟ್ಟಿ, ಅಖಿಲೇಶ್ ಶೆಟ್ಟಿ, ಸುಕುಮಾರ, ಮಂಜೇಶ್, ಪ್ರತೀಕ್, ಪ್ರಶಾಂತ ಮೊಗವೀರ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಉಡುಪಿ ಜೈಲಾಧಿಕಾರಿಯಾಗಿರುವ ಶಿವಕುಮಾರ್ ಮೇಲಾಧಿಕಾರಿಗಳ ನಿರ್ದೇಶನದಂತೆ ನ್ಯಾಯಾಲಯದ ಅನುಮತಿ ಪಡೆದು ಹಲ್ಲೆಗೆ ಒಳಗಾದ ಇರ್ಷಾದ್ ಮತ್ತು ರಫೀಕ್‌ನನ್ನು ಮಂಗಳೂರು ಜೈಲಿಗೆ ಮತ್ತು ಹಲ್ಲೆ ನಡೆಸಿದ 10 ಮಂದಿಯನ್ನು ಚಿತ್ರದುರ್ಗ, 14 ಮಂದಿಯನ್ನು ಕಾರವಾರ ಮತ್ತು ಇಬ್ಬರನ್ನು ಚಿಕ್ಕಮಗಳೂರು ಜೈಲಿಗೆ ವರ್ಗಾವಣೆಗೊಳಿಸಿದ್ದಾರೆ.

ದನ ಸಾಗಾಟದ ಆರೋಪದಲ್ಲಿ ಪ್ರವೀಣ್ ಪೂಜಾರಿಯನ್ನು ಹತ್ಯೆಗೈದ ಒಟ್ಟು 21 ಮಂದಿ ಆರೋಪಿಗಳು ಆ.18ರಿಂದ ಹಿರಿಯಡಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರೆಲ್ಲ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾಗಿದ್ದಾರೆ. ಇದೀಗ ಬೇರೆ ಜೈಲಿಗೆ ವರ್ಗಾವಣೆಗೊಂಡಿರುವ ಆರೋಪಿಗಳ ಪೈಕಿ ಐದು ಮಂದಿ ಬೇರೆ ಪ್ರಕರಣದ ಕೈದಿಗಳು ಕೂಡ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News