ಮಂಗಳೂರಿನಲ್ಲಿ ಸ್ಕಿಲ್‌ಗೇಮ್, ಮಸಾಜ್ ಕೇಂದ್ರ ಬಂದ್!

Update: 2016-11-29 10:41 GMT

ಮಂಗಳೂರು, ನ.29: ನಗರದಲ್ಲಿ ನಡೆಯುತ್ತಿರುವ ಎಲ್ಲಾ ಸ್ಕಿಲ್‌ಗೇಮ್ ಹಾಗೂ ಮಸಾಜ್ ಕೇಂದ್ರಗಳನ್ನು ಬಂದ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನಪಾ ಮೇಯರ್ ಹರಿನಾಥ್ ಸೂಚಿಸಿದ್ದಾರೆ.
ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ನಗರದಲ್ಲಿ ಸ್ಕಿಲ್ ಗೇಮ್ ಹಾಗೂ ಮಸಾಜ್ ಕೇಂದ್ರಗಳು ಅವ್ಯಾಹತವಾಗಿ ತಲೆ ಎತ್ತಿರುವ ಬಗ್ಗೆ ಈ ಹಿಂದೆ ಹಲವು ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಯಾವ ಕ್ರಮಗಳಾಗಿವೆ ಎಂದು ಸದಸ್ಯರಾದ ದಯಾನಂದ ಶೆಟ್ಟಿ, ನವೀನ್ ಡಿಸೋಜ ಮೊದಲಾದವರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್, ಮನಪಾದಿಂದ ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್ ಮೊದಲಾದ ಆಟಗಳಿಗೆ ಮಾತ್ರವೇ ಪರವಾನಿಗೆ ನೀಡಲಾಗುತ್ತಿದೆ. ಉಳಿದಂತೆ ಧರ್ಮಸ್ಥಳ ಆಯುರ್ವೇದಿಕ್ ಆಯುರ್ವೇದಿಕ್ ಸೆಂಟರ್ ಹೊರತು ಪಡಿಸಿ ಯಾವುದೇ ಮಸಾಜ್ ಪಾರ್ಲರ್‌ಗಳಿಗೆ ಮನಪಾದಿಂದ ಪರವಾನಿಗೆ ನೀಡಲಾಗಿಲ್ಲ. ಇಂತಹ ಪಾರ್ಲರ್‌ಗಳು ನಗರದಲ್ಲಿ ಕಾರ್ಯಾಚರಿಸುತ್ತಿದ್ದು, ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದಾಳಿಯನ್ನೂ ನಡೆಸಲಾಗಿದೆ. ಇತ್ತೀಚೆಗೆ ಗೃಹ ಸಚಿವರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಅವರ ಗಮನಕ್ಕೆ ತರಲಾಗಿತ್ತು. ಅವರು ತಕ್ಷಣ ಪೊಲೀಸ್ ಆಯುಕ್ತರನ್ನು ಕರೆಯಿಸಿ ವರದಿ ನೀಡುವಂತೆ ತಿಳಿಸಿದ್ದರು. ಆ ಬಳಿಕ ಸಾಕಷ್ಟು ಮಸಾಜ್ ಪಾರ್ಲರ್‌ಗಳು ಹಾಗೂ ರಿಕ್ರಿಯೇಶನ್ ಕ್ಲಬ್‌ಗಳನ್ನು ಬಂದ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ಈ ಬಗ್ಗೆ ಕಾಳಜಿ ವಹಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

ಯಾವುದೇ ಒಳಾಂಗಣ ಕ್ರೀಡೆಗಳಿಗೂ ಮನಪಾದಿಂದ ಪರವಾನಿಗೆ ನೀಡಬಾರದು ಎಂದು ಸದಸ್ಯ ನವೀನ್ ಡಿಸೋಜ ಹಾಗೂ ವಿನಯರಾಜ್ ಈ ಸಂದರ್ಭ ಆಗ್ರಹಿಸಿದರು.

ಮೇಯರ್ ಹರಿನಾಥ್ ಪ್ರತಿಕ್ರಿಯಿಸಿ, ನಗರದಲ್ಲಿ ನಡೆಯುತ್ತಿರುವ ಎಲ್ಲಾ ಸ್ಕಿಲ್‌ಗೇಮ್ ಹಾಗೂ ಮಸಾಜ್ ಕೇಂದ್ರಗಳನ್ನು ಬಂದ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. 

750 ಮಂದಿಗೆ 2 ಶೌಚಾಲಯ!

ನಗರದ ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆ ವಹಿಸಿರುವ ಆ್ಯಂಟನಿ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಿಬ್ಬಂದಿಗೆ ಬಂಗ್ರ ಕೂಳೂರಿನಲ್ಲಿ ಕಾರ್ಯ ನಿರ್ವಹಣೆಯ ಅನುಕೂಲಕ್ಕಾಗಿ ತಂಗುವ ವ್ಯವಸ್ಥೆ ಮಾಡಲಾಗಿದೆ. ಆದರೆ ಸಂಸ್ಥೆಯ 750 ಮಂದಿ ಸಿಬ್ಬಂದಿಗೆ 2 ಶೌಚಾಲಯಗಳು ಮಾತ್ರವೇ ಇದ್ದು, ಅಲ್ಲಿ ಪರಿಸರ ಅನೈರ್ಮಲ್ಯದ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ ಎಂದು ಸದಸ್ಯ ದಿವಾಕರ್ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಈ ಸ್ಥಳಕ್ಕೆ ತಾನು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅಲ್ಲಿ ಪರಿಸರ ಸ್ವಚ್ಛವಾಗಿರುವುದು ಕಂಡು ಬಂದಿದೆ ಎಂದು ಹೇಳಿದಾಗ, ಹಾಗಾದರೆ ಸಾರ್ವಜನಿಕರು ದೂರುತ್ತಿರುವುದು ಸುಮ್ಮನೆಯೇ ಎಂದು ದಿವಾಕರ್ ಅಸಮಾಧಾನ ವ್ಯಕ್ತಪಡಿಸುತ್ತಾ, ಮೇಯರ್ ಪೀಠದೆದುರು ತೆರಳಿ ಆಯುಕ್ತರ ಹೇಳಿಕೆಯನ್ನು ಖಂಡಿಸಿದರು.

ಮೇಯರ್ ಹರಿನಾಥ್ ಸ್ಪಂದಿಸುತ್ತಾ, ತಾನು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು, ಸಚೇತಕರು ಹಾಗೂ ಸ್ಥಳೀಯ ಸದಸ್ಯರ ಜತೆ ಒಂದು ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News