ಮುಲ್ಕಿ : “ಮಕ್ಕಳ ಹಕ್ಕು” ವಿಶೇಷ ಗ್ರಾಮಸಭೆ

Update: 2016-11-29 17:34 GMT

ಮುಲ್ಕಿ,ನ.29 : ಹಳೆಯಂಗಡಿ ಸಂತೆಕಟ್ಟೆ ಗುಂಡಿ ರಸ್ತೆ ಸರಿಯಾಗಿಲ್ಲ. ಮಳೆಗಾಲದ ಸಂದರ್ ಶಾಲೆಗೆ ಬರಲು ಬಹಳ ಕಷ್ಟ, ಕಿನ್ನಿಗೋಳಿಯಿಂದ ಬರುವ ಬಸ್ಸುಗಳ ವೇಗಕ್ಕೆ ಕಡಿವಾಣ ಹಾಕಬೇಕು. ಈ ಬಸ್ಸುಗಳ ಧಾವಂತದಲ್ಲಿ ವಿದ್ಯಾರ್ಥಿಗಳಿಗೆ ಅಪಾಯವಿದೆ. ಪಡುಪಣಂಬೂರು ಸರಕಾರಿ ಶಾಲೆಯ ಶೌಚಾಲಯದ ಬಳಿ ಪೊದೆ ತುಂಬಿದ್ದು ಹಾವುಗಳು ಶೌಚಾಲಯದ ಮಾಡಿನಲ್ಲಿ ಸಂಚರಿಸುವುದರಿಂದ ಭಯವಾಗುತ್ತದೆ. ಪುನರೂರು ಕ್ವಾಟ್ರಸ್ ಬಳಿ ರಸ್ತೆ ಸರಿಯಾಗಿಲ್ಲ. ರಾತ್ರಿ ಯಾವುದೇ ರಿಕ್ಷಾ ಅಥವಾ ಇನ್ನಿತರ ವಾಹನ ಬಾರದೆ ಸಮಸ್ಯೆಯಾಗುತ್ತದೆ. ಕೆರೆಕಾಡು ಬಸ್ಸು ನಿಲ್ದಾಣ ಕುಸಿದಿದೆ ಈ ಬಗ್ಗೆ ಸಂಬಂಧಿತರು ಗಮನಹರಿಸಬೇಕು. ಇವು ಪಡುಪಣಂಬೂರು ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಹಕ್ಕು ಜಾರಿಗಾಗಿ ಮಂಗಳವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಕಾಡು ಬೆಳ್ಳಾಯರಿನಲ್ಲಿ ನಡೆಸಿದ ‘ ಮಕ್ಕಳ ಹಕ್ಕು ’ವಿಶೇಷ ಗ್ರಾಮಸಭೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ನೀಡಿದ ದೂರುಗಳು.

   ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್ ಈ ಬಗ್ಗೆ ಮಾತನಾಡಿ, ಮಕ್ಕಳ ಹಕ್ಕು ಬಾದ್ಯತೆಗಳ ಬಗ್ಗೆ ಪಡುಪಣಂಬೂರು ಪಂಚಾಯತ್ ಶೀಘ್ರವಾಗಿ ಸ್ಪಂದಿಸುತ್ತಿದೆ. ಮಕ್ಕಳ ಶಿಕ್ಷಣ ಸಂಬಂದಿ ಸಮಸ್ಯೆಗಳು ಹಾಗೂ ಮೂಲ ಭೂತ ವ್ಯವಸ್ಥೆಗಳ ಬಗ್ಗೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ದೂರುಗಳನ್ನು ಪರಿಶೀಲಿಸಿ ಸಂಬಂಧಿತ ಇಲಾಖೆಗೆ ಪತ್ರ ಮುಖೇನ ತಿಳಿಸಲಾಗುವುದು ಎಂದರು.

  ಪಡುಪಣಂಬೂರು ಶಾಲೆಯ ಮುಖ್ಯ ಶಿಕ್ಷಕಿ ರತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಕ್ಕಳ ಹಕ್ಕು ಬಾದ್ಯತೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಜೊತೆಗೆ ಮಕ್ಕಳು ಅನುಭವಿಸುವ ಕಿರುಕುಳಗಳು ಹಾಗೂ ಸಮಾಜಿಕ ಶೋಷಣೆಯ ಬಗ್ಗೆ ಮಕ್ಕಳು ನೇರವಾಗಿ ಪೋಷಕರು ಮತ್ತು ಶಿಕ್ಷಕರಲ್ಲಿ ತಿಳಿಸಬೇಕು. ಇಲ್ಲವಾದರೆ ಮಕ್ಕಳು ನೇರವಾಗಿ 1098 ಗೆ ಉಚಿತ ಕರೆ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕೆರಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಆಚಾರ್ಯ ಮಾತನಾಡಿ, ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಗೆ ಬರಬೇಕು ಶ್ರೀಮಂತರು ಮತ್ತು ಬಡವರ ಮಕ್ಕಳಿಗೆ ಒಂದೇ ರೀತಿಯ ಶಿಕ್ಷಣ ಲಭ್ಯವಾಗಬೇಕು. ನಗರದ ಶಿಕ್ಷಣ ಸೌಲಭ್ಯಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಮರೀಚಿಕೆಯಾಗಬಾರದು. ಮಕ್ಕಳ ಹಕ್ಕು ಬಾದ್ಯತೆಗಳನ್ನು ಹಿರಿಯರು ಗೌರವಿಸುವ ಮೂಲಕ ಪ್ರತಿಭಾನ್ವಿತ ಮುಂದಿನ ಪೀಳಿಗೆಯ ಉನ್ನತಿಗೆ ಎಲ್ಲರೂ ಸಹಕಾರಿಗಳಾಗಬೇಕು ಎಂದರು.

   ಈಸಂದರ್ಭ ಸುಬ್ರಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ಜೀವಿತಾ, ಹಿಂದುಸ್ತಾನಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಜ್ವಲ್, ತೋಕೂರು ತಪೋವನ ರಾಮಣ್ಣ ಶೆಟ್ಟಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನೇಹಾ, ಪಡುಪಣಂಬೂರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ, ಪಡುಪಣಂಬೂರು ಪಂಚಾಯತ್ ಉಪಾಧ್ಯಕ್ಷೆ ಸುರೇಖಾ ಕೆ., ಪಿಡಿಒ ಅನಿಥಾ ಕ್ಯಾಥರಿನ್, ಸಮೂಹ ಸಂಪನ್ಮೂಲ ವ್ಯಕ್ತಿ ಸಿಆರ್‌ಪಿ ಕುಸುಮಾ, ಪಂ. ಸದಸ್ಯರಾದ ವಿನೋದ್ ಸಾಲ್ಯಾನ್, ವನಜಾ,ಸಂಪಾವತಿ, ಕುಸುಮಾ, ಮಂಜುಳಾ, ಸುಜಾತ, ಲೀಲಾ ಬೆಂಜನ್, ಉಮೇಶ್, ಹೇಮನಾಥ, ಪುಷ್ಪಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಗರತ್ನ, ಮುಖ್ಯ ಶಿಕ್ಷಕಿ ಭುವನೇಶ್ವರೀ ಅತಿಥಿಗಳಾಗಿದ್ದರು,.

ಮಕ್ಕಳ ಗ್ರಾಮ ಸಭೆಯ ಪ್ರಯುಕ್ತ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.

  ಸುಬ್ರಮಣ್ಯ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಸ್ವಾಗತಿಸಿದರು. ಪಡುಪಣಂಬೂರು ಪಂಚಾಯತ್ ಸಿಬ್ಬಂದಿ ಶರ್ಮಿಳಾ ನಡಾವಳಿ ವಾಚಿಸಿದರು. ತೋಕೂರು ಹಿಂದುಸ್ಥಾನಿ ಶಾಲೆಯ ವಿದ್ಯಾರ್ಥಿನಿ ಸಾಕ್ಷಿ ನಿರೂಪಿಸಿದರು. ರಾಮಣ್ಣ ಶೆಟ್ಟಿ ಶಾಲೆಯ ವಿದ್ಯಾರ್ಥಿನಿ ನೇಹಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News