ಹದಗೆಟ್ಟ ಸುರತ್ಕಲ್ ಕಾನ ರಸ್ತೆ ದುರಸ್ತಿಗೆ 10 ದಿನಗಳ ಗಡುವು

Update: 2016-11-30 08:14 GMT

ಮಂಗಳೂರು, ನ.30: ಸುರತ್ಕಲ್- ಕಾನ ಬಿಎಎಸ್‌ಎಫ್, ಎಚ್‌ಪಿಸಿಎಲ್, ಎಂಆರ್‌ಪಿಎಲ್ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಕ್ಷೇತ್ರಾಧ್ಯಕ್ಷ ನೂರುಲ್ಲಾ ಕುಳಾಯಿ, ಹದಗೆಟ್ಟ ಸುರತ್ಕಲ್-ಕಾನ ರಸ್ತೆಯ ದುರಸ್ತಿಗೆ ಆಗ್ರಹಿಸಿ ಅ.24ರಂದು ಪಕ್ಷವು ಪ್ರತಿಭಟನೆ ನಡೆಸಿತ್ತು. ಆವಾಗ ಶಾಸಕ ಮೊಯ್ದಿನ್ ಬಾವಾ ಹಾಗೂ ಎಂಆರ್‌ಪಿಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ರಸ್ತೆಯನ್ನು ದುರಸ್ತಿ ಮಾಡುತ್ತೇವೆ. ಅಲ್ಲಿಯವರೆಗೆ ವಾರಕ್ಕೆ ಎರಡು ಬಾರಿ ಟ್ಯಾಂಕರ್ ಮೂಲಕ ನೀರು ಹಾಯಿಸಿ ಧೂಳು ಏಳದಂತೆ ಎಚ್ಚರ ವಹಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ನ.30 ಆದರೂ ಕೂಡ ಈ ರಸ್ತೆಯನ್ನು ದುರಸ್ತಿ ಮಾಡಿಸಿಲ್ಲ. ಹಾಗಾಗಿ ಮುಂದಿನ 10 ದಿನದೊಳಗೆ ಈ ರಸ್ತೆಯನ್ನು ದುರಸ್ತಿ ಮಾಡಿಸದಿದ್ದರೆ ಮಂಗಳೂರು ಮನಪಾ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್ ಅಯಾಝ್, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಎ.ಕೆ.ಅಶ್ರಫ್, ಸುರತ್ಕಲ್ ವಲಯ ಅಧ್ಯಕ್ಷ ಅಝರ್, ಉಪಾಧ್ಯಕ್ಷ ಸಲಾಂ ಕಾನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News