‘ಮುಸ್ಲಿಮ್ ಸಮುದಾಯ ಶಿಕ್ಷಣದೊಂದಿಗೆ ದೇಶದ ಶಕ್ತಿಯಾಗಿ ಬೆಳೆಯಬೇಕೆಂಬುದೇ ಡಿಕೆಎಸ್‌ಸಿ ಉದ್ದೇಶ’
ಮೂಳೂರಿನಲ್ಲಿ ಕಳೆದ ಎರಡು ದಶಕಗಳಿಂದ ಕಾರ್ಯಾಚರಿಸುತ್ತಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿಕೆಎಸ್‌ಸಿ) ಸಂಸ್ಥೆಯ 20ನೆ ವಾರ್ಷಿ ಕೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ರಾಗಿರುವ ಅಲ್‌ಹಾಜ್ ಅಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿವೆ.
ವಾ.ಭಾ.: ಡಿಕೆಎಸ್‌ಸಿ ಬೆಳೆದು ಬಂದ ರೀತಿ ಮತ್ತು ಅದರ ಯಶಸ್ವಿಗೆ ಕಾರಣಗಳು ಏನು?
ತಂಙಳ್: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್, ಸೌದಿ ಅರೇಬಿಯಾದ ಮರಳುಗಾಡಿ ನಲ್ಲಿ ದುಡಿಯುವ ವರ್ಗದ ತ್ಯಾಗ ಮತ್ತು ಪರಿಶ್ರಮದಿಂದ ಜನ್ಮತಾಳಿರುವ ಸಂಸ್ಥೆ. ಧಾರ್ಮಿಕ ನೇತಾರ ಅಲ್‌ಹಾಜ್ ಹಸನುಲ್ ಫೈಝಿ ನಾಯಕತ್ವದಲ್ಲಿ ಈ ಸಂಸ್ಥೆ ತನ್ನ ಕಾರ್ಯಯೋಜನೆಗಳನ್ನು ಆರಂಭಿಸಿತು. ಸಂಘಟಿತ ಪರಿಶ್ರಮ, ನಿಸ್ವಾರ್ಥ ಸೇವೆ ಹಾಗೂ ಪರಿಶುದ್ಧ ಉದ್ದೇಶದಿಂದ ಎರಡು ದಶಕಗಳ ಹಿಂದೆ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಸ್ವಂತ ನಾಲ್ಕು ಎಕರೆ ಸ್ಥಳದಲ್ಲಿ ಅಲ್ ಇಹ್ಸಾನ್ ಎಜುಕೇಶನ್ ಅಕಾಡಮಿ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು.
ಅಲ್ಲಾಹನ ಅಪಾರ ಅನುಗ್ರಹದಿಂದ ಇಂದು ಆ ಸಂಸ್ಥೆಯು ಪದವಿ ಪೂರ್ವ ಕಾಲೇಜು ಆಗಿ ಸಮುದಾಯದ ಯುವ ಸಮುದಾಯಕ್ಕೆ ಜ್ಞಾನ ಕೇಂದ್ರವಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯು ಸಮುದಾಯದ ಸಾವಿರಾರು ಮಕ್ಕಳಿಗೆ ಭವಿಷ್ಯ ನೀಡುತ್ತಿದೆ ಹಾಗೂ ನೂರಾರು ಕುಟುಂಬಗಳಿಗೆ ಬದುಕು ಕಟ್ಟಿ ಕೊಡುತ್ತಿದೆ. ಅಧಿಕಾರ ಮತ್ತು ಪದವಿಯ ಆಕಾಂಕ್ಷೆಯಿಲ್ಲದೆ ಕೇವಲ ಪರಲೋಕ ಸಂಪಾದನೆಯ ಬಯಕೆಯಿಂದಾಗಿಯೇ ಈ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ಅನಿವಾಸಿ ಭಾರತೀಯರ, ಊರ ಪರಊರ ಜನರ ಸಹ ಕಾರವೇ ನಾವು ಇಂದು ಯಶಸ್ವಿಯ ಹೆಜ್ಜೆ ಇಡಲು ಕಾರಣವಾಗಿದೆ.
ವಾ.ಭಾ.: ಮೂಳೂರಿನಲ್ಲಿ ಎಷ್ಟು ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ ಮತ್ತು ಯಾವ ರೀತಿಯಲ್ಲಿ ಶಿಕ್ಷಣಗಳನ್ನು ಒದಗಿಸಲಾಗುತ್ತಿದೆ?
ತಂಙಳ್: ಸುನ್ನೀ ಸೆಂಟರ್‌ನ ಪ್ರಥಮ ಕ್ಯಾಂಪಸ್‌ನಲ್ಲಿ ಸುಂದರವಾದ ಮಸೀದಿ, ಅಲ್ ಇಹ್ಸಾನ್ ಯತೀಂ ಖಾನ್, ಅಲ್ ಇಹ್ಸಾನ್ ದಾರುಲ್ ಮಸಾ ಕೀನ್, ಅಲ್‌ಇಹ್ಸಾನ್ ಶರೀಯತ್ತ್ ಕಾಲೇಜು, ಅಲ್ ಇಹ್ಸಾನ್ ಏಜು ಪ್ಲಾನೆಟ್, ಅಲ್ ಇಹ್ಸಾನ್ ಹಿಫ್ಲುಲ್ ಕುರ್‌ಆನ್ ಕಾಲೇಜು, ಅಲ್ ಇಹ್ಸಾನ್ ಮದರಸ, ಅಲ್ ಇಹ್ಸಾನ್ ಗೈಡನ್ಸ್ ಬ್ಯೂರೋ, ಅಲ್ ಇಹ್ಸಾನ್ ಟ್ಯೂಷನ್ ತರಗತಿ, ಅಲ್‌ಇಹ್ಸಾನ್ ರೆಸಿಡೆನ್ಸಿಯಲ್ ಸ್ಕೂಲ್ ಕಾರ್ಯಾಚರಿಸುತ್ತಿದ್ದು, ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸಿ ಮುನ್ನಡೆಯಬೇಕಾದ ಪ್ರಬುದ್ಧ ಆಲಿಮ್‌ಗಳನ್ನು ಸೃಷ್ಠಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ.
40 ಮಕ್ಕಳಿಂದ ಆರಂಭಗೊಂಡ ಈ ಸಂಸ್ಥೆಯು ಇಂದು 1,500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಆಂಗ್ಲ ಮಾಧ್ಯಮದ ಮೂಲಕ ಎಲ್‌ಕೆಜಿ ಯಿಂದ ಮಹಿಳಾ ಪದವಿ ಪೂರ್ವ ಕಾಲೇಜು ವರೆಗೆ ಸಂಸ್ಥೆ ಬೆಳೆದು ನಿಂತಿದೆ. 20ವರ್ಷಗಳ ಅವಧಿಯಲ್ಲಿ ಒಟ್ಟು 18 ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಿ ಧಾರ್ಮಿಕ ಮತ್ತು ಬೌದ್ಧಿಕ ಶಿಕ್ಷಣವನ್ನು ಸಮುದಾಯದ ಬಡ, ನಿರ್ಗತಿಕ, ಅನಾಥ ಮಕ್ಕಳಿಗೆ ಒದಗಿಸಲಾಗುತ್ತಿದೆ. ಅತ್ಯುತ್ತಮ ವಸತಿ ನಿಲಯ, ಸ್ವಚ್ಛ ಮತ್ತು ಆಧುನಿಕ ರೀತಿಯ ಮೂಲ ಸೌಲಭ್ಯವನ್ನು ಮಕ್ಕಳಿಗೆ ಇಲ್ಲಿ ನೀಡಲಾಗುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ. ಬಡವರಿಗೆ ಮತ್ತು ಅನಾಥರಿಗೆ ಉಚಿತ ಸೌಲಭ್ಯ ಕಲ್ಪಿಸ ಲಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಸಹನೆ, ಜೀವನ ಮೌಲ್ಯ ಮತ್ತು ನೈತಿಕ ಶಿಷ್ಟಾಚಾರವನ್ನು ತಿಳಿಹೇಳಲಾಗುತ್ತಿದೆ. ಆಧುನಿಕ ಸೌಲಭ್ಯದ ಶಿಕ್ಷಣ ವಿಧಾನಗಳ ಪ್ರಯೋಜನ ಪಡೆದು ಇಲ್ಲಿ ಬೋಧಿಸಲಾಗುತ್ತಿದೆ. ಅನುಭವಿ ಶಿಕ್ಷಕ ವೃಂದದ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ನಿರಂತರವಾಗಿ ನೀಡಲಾಗುತ್ತಿದೆ.
ವಾ.ಭಾ.: ಡಿಕೆಎಸ್‌ಸಿ ಶಿಕ್ಷಣ ಸಂಸ್ಥೆಗಳ ಮುಖ್ಯ ಗುರಿ ಏನು?
ತಂಙಳ್: ಮುಸ್ಲಿಮ್ ಸಮುದಾಯ ಶಿಕ್ಷಿತ ಸಮುದಾಯವನ್ನಾಗಿಸುವುದೇ ನಮ್ಮ ಮುಖ್ಯ ಧ್ಯೇಯ. ವಿದ್ಯೆ ಎಲ್ಲಕ್ಕಿಂತ ಪ್ರಮುಖವಾದುದು. ಶಿಕ್ಷಣದಲ್ಲಿ ಹಿಂದುಳಿದ ಸಮುದಾಯ ಎಂದು ಕರೆಯಲ್ಪಟ್ಟ ಮುಸ್ಲಿಮ್ ಸಮುದಾಯವನ್ನು ಆ ಕ್ಷೇತ್ರದಲ್ಲಿ ಮುಂಚೂಣಿಗೆ ತರುವ ಕಾರ್ಯ ಮಾಡಲಾಗುತ್ತದೆ. ಈ ಮೂಲಕ ಈ ದೇಶದ ಪ್ರಗತಿಗೆ ನಮ್ಮ ಶಕ್ತಿ ಹಾಗೂ ಕೊಡುಗೆಯನ್ನು ನೀಡಲಾಗುವುದು. ಇದರಿಂದ ಇಲ್ಲಿ ಐಕ್ಯತೆ ಹಾಗೂ ಸೌಹಾರ್ದ ನೆಲೆ ನಿಲ್ಲಬೇಕಾಗಿದೆ. ಇಲ್ಲಿ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು, ಮಾನವ ಸೇವೆಗೈಯ್ಯಲು, ನೈತಿಕ ಮೌಲ್ಯಗಳನ್ನು ರೂಪಿಸಿಕೊಳ್ಳಲು ಮತ್ತು ದೇವನ ತೃಪ್ತಿಯನ್ನು ಗಳಿಸುವ ನಿಟ್ಟಿನಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ನೀಡಿ ಮಕ್ಕಳನ್ನುಉತ್ತಮ ನಾಗರಿಕರನ್ನಾಗಿ ರೂಪಿಸಲಾಗುತ್ತದೆ. ಗುಣಮಟ್ಟದ ಶಿಕ್ಷಣ ಮತ್ತು ಮೌಲ್ಯಾಧಾರಿತ ಜೀವನ ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಯುವಕ ಯುವತಿಯರು ಶಿಕ್ಷಣ ಗಳಿಸಿ ತಮ್ಮ ಜೀವನವನ್ನು ರೂಪಿಸುವುದರ ಜೊತೆಗೆ ಸಮಾಜ ಮತ್ತು ದೇಶದ ಪ್ರಗತಿಗೆ ವಿನಿಯೋಗ ಪಡಿಸಲು ಸ್ಪೂರ್ತಿಯನ್ನು ನೀಡಲಾಗುತ್ತದೆ.
ವಾ.ಭಾ.: ಡಿಕೆಎಸ್‌ಸಿ ಮಹಿಳೆಯರ ಶಿಕ್ಷಣಕ್ಕೆ ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ?
ತಂಙಳ್: ಡಿಕೆಎಸ್‌ಸಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಮಹಿಳಾ ಶಿಕ್ಷಣದ ಅಗತ್ಯತೆಯನ್ನು ಅರಿತುಕೊಂಡಿರುವ ಸಂಸ್ಥೆ ಪಿಯು ಕಾಲೇಜಿನ ನಂತರ ಇದೀಗ ಪದವಿ ಕಾಲೇಜನ್ನು ಆರಂಭಿಸುತ್ತಿದೆ. ಮಹಿಳೆಯ ರಿಗೆ ಉನ್ನತ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಕಾಲೇಜನ್ನು ಆರಂಭಿಸಲಾಗುತ್ತಿದೆ. ಅಭದ್ರತೆಯ ಇಂದಿನ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಭದ್ರತೆಯ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ. ಇಸ್ಲಾಮೀ ವಾತಾವರಣ, ವಸ್ತ್ರಧಾರಣೆ, ದಿನಚರಿಯನ್ನು ಜೀವನ ಶೈಲಿಯನ್ನಾಗಿಸಿ ಉನ್ನತ ದರ್ಜೆಯ ಜ್ಞಾನವನ್ನು ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿದೆ. ಪಿಯುಸಿ ವಿದ್ಯಾರ್ಥಿನಿಯರಿಗೆ ಆಲಿಮಾ ಕೋರ್ಸ್ ಮತ್ತು ಇಸ್ಲಾಮಿನ ಇತಿಹಾಸ ಕಲಿಸುವ ಇಹ್ಸಾನ್ ಬನಾತ್ ಕೇರ್ ಎಂಬ ಕೋರ್ಸನ್ನು ಆರಂಭಿಸಲಾಗಿದೆ. ಈ ಮೂಲಕ ಹೆಣ್ಣು ಮಗಳೊಬ್ಬಳು ಲೌಕಿಕ ಶಿಕ್ಷಣದ ಪದವಿಯ ಜೊತೆ ಸಮಗ್ರವಾದ ಧಾರ್ಮಿಕ ಜ್ಞಾನವನ್ನು ಪಡೆಯುತ್ತಾಳೆ.
ವಾ.ಭಾ.: ಡಿಕೆಎಸ್‌ಸಿ ಶಿಕ್ಷಣದ ಜೊತೆ ಸಮಾಜ ಸೇವೆಯಲ್ಲಿಯೂ ಯಾವ ರೀತಿ ತೊಡಗಿಸಿಕೊಂಡಿದೆ?
ತಂಙಳ್: ಸಂಸ್ಥೆಯು ಶಿಕ್ಷಣದ ಜೊತೆ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಕೂಡ ನಡೆಸುತ್ತಿದೆ. ಉಚಿತ ಮೆಡಿಕಲ್ ಕ್ಯಾಂಪ್, ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಸಮಾಜಕ್ಕೆ ಒದಗಿಸುತ್ತಿದೆ. ಪ್ರತಿಭಾವಂತರನ್ನು ಪುರಸ್ಕರಿಸಲಾಗುತ್ತಿದೆ. ಸಮುದಾಯದಲ್ಲಿ ಧಾರ್ಮಿಕ ಸೇವೆ ನೀಡುವ ಹಿರಿಯ ಉಲೆಮಾಗಳನ್ನು ಗೌರವಿಸಲಾಗುತ್ತಿದೆ. ಬಡ ಮತ್ತು ಅನಾಥ ಹೆಣ್ಣು ಮಕ್ಕಳ ವೈವಾಹಿಕ ಜೀವನಕ್ಕೆ ಸಂಸ್ಥೆಯು ನೆರವನ್ನು ನೀಡುತ್ತಿದೆ. ಈ ಬಾರಿ 20 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹದ ಮೂಲಕ ಬದುಕು ಕಲ್ಪಿಸಿಕೊಡಲಾಗುತ್ತಿದೆ. ಬಡು ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರ ವನ್ನು ವಿತರಿಸಲಾಗುತ್ತಿದೆ. ಹೀಗೆ ಸಂಸ್ಥೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ನೆರವನ್ನು ಒದಗಿಸುತ್ತಿದೆ.
ವಾ.ಭಾ.: ಡಿಕೆಎಸ್‌ಸಿ ಮುಂದಿರುವ ಯೋಜನೆಗಳು ಏನು?
ತಂಙಳ್: ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಡಿಕೆಎಸ್‌ಸಿ ಪದವಿ ಪೂರ್ವ ಕಾಲೇಜಿನ ನಂತರ ಇದೀಗ ಸುಮಾರು ಎಂಟು ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಪ್ರಥಮ ದರ್ಜೆ ಪದವಿ ಕಾಲೇಜನ್ನು ಆರಂಭಿಸುತ್ತಿದೆ. ಇದು ಡಿ.4ರಂದು ಲೋಕಾರ್ಪಣೆಗೊಳ್ಳಲಿದೆ. ಅಲ್ಲದೆ ಪುರುಷರಿಗಾಗಿ ಪದವಿ ಕಾಲೇಜನ್ನು ಸ್ಥಾಪಿಸುವಂತೆಯೂ ಬೇಡಿಕೆಗಳು ಬರುತ್ತಿದ್ದು, ಆ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ಅದೇ ರೀತಿ ಸುಸಜ್ಜಿತವಾದ ಆತ್ಯಾಧುನಿಕ ಗ್ರಂಥಾಲಯವನ್ನು ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇಲ್ಲಿ ಧಾರ್ಮಿಕ ಮತ್ತು ಬೌದ್ಧಿಕ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು. ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಸುಮಾರು ಮೂರು ಎಕರೆ ಜಾಗದಲ್ಲಿ ಡಿಕೆಎಸ್‌ಸಿ ನೇತೃತ್ವದಲ್ಲಿ ಪ್ರಾಥಮಿಕ ಮಟ್ಟದಿಂದ ಪದವಿಯವರೆಗಿನ ಶಿಕ್ಷಣ ಸಂಸ್ಥೆ ಯನ್ನು ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ.