ಕೆನಡಾದಲ್ಲಿ ಆದಿವಾಸಿ ಮಹಿಳೆಯರ ಸ್ಥಿತಿಗತಿ ಶೋಚನೀಯ: ಪ್ರೊ. ಡೇನಿಯಲ್ ಡ್ರಾಚ್

Update: 2016-12-02 09:59 GMT

ಕೊಣಾಜೆ, ಡಿ.2: ಆದಿವಾಸಿಗಳು ಕೆನಡಾ ದೇಶದ ಜನಸಂಖ್ಯೆಯ 3% ಆಗಿದ್ದು, ಅವರಲ್ಲಿ 60% ಪಟ್ಟಣಗಳಿಗೆ ವಲಸೆ ಬಂದಿದ್ದು ಇದು ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸಂಕೇತವಾಗಿದೆ. ಇದರಿಂದಾಗಿ ಆದಿವಾಸಿಗಳು ಅವರ ವಿಶಿಷ್ಠವಾದ ಸಂಸ್ಕೃತಿಯನ್ನು ಕಳೆದುಕೊಂಡಿದ್ದು, ಮಹಿಳೆಯರು ಪಟ್ಟಣಗಳಲ್ಲಿ ವೇಶ್ಯಾವಾಟಿಕೆ ಹಾಗೂ ಮಾದಕ ವ್ಯಸನದಲ್ಲಿ ತೊಡಗಿ ವಿನಾಶದ ಅಂಚಿನಲ್ಲಿರುವುದು ವಿಷಾಧನೀಯ ಎಂದು ಕೆನಡಾ ದೇಶದ ಟೊರೊಂಟೊ ನಗರದ ಯೋರ್ಕ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಡೇನಿಯಲ್ ಡ್ರಾಚ್ ಅವರು ಹೇಳಿದರು

ಅವರು ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ 'ಕೆನಡಾ ದೇಶದಲ್ಲಿ ಬಹುಸಾಂಸ್ಕೃತಿಕತೆ ಹಾಗೂ ವರ್ಣಬೇಧ ಆದಿವಾಸಿ ಮಹಿಳೆಯರ ಸ್ಥಿತಿಗತಿ' ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. 

ಕೆನಡಾ ದೇಶವು 1977ರಲ್ಲಿ ಬಹುಸಾಂಸ್ಕೃತಿಕತೆಯನ್ನು ಒಪ್ಪಿಕೊಂಡ ಪ್ರಥಮ ದೇಶವಾಗಿದ್ದರೂ ಕೂಡಾ, ಅಲ್ಲಿ ಮೂಲವಾಸಿ ಅಥವಾ ಆದಿವಾಸಿ ಮಹಿಳೆಯರ ಮೇಲೆ ವರ್ಣಬೇಧವು ಅವ್ಯಾಹತವಾಗಿ ನಡೆಯುತ್ತಿದ್ದು ದೌರ್ಜನ್ಯಗಳು ಇನ್ನೂ ಮುಂದುವರಿಯುತ್ತಿವೆ.  ಅಂಕಿ ಅಂಶಗಳ ಪ್ರಕಾರ ಸುಮಾರು 1,250 ಆದಿವಾಸಿ ಮಹಿಳೆಯರು ಕಾಣೆಯಾಗಿದ್ದು, ಸರಕಾರಿ ವ್ಯವಸ್ಥೆಯನ್ನು ಇದರ ಬಗ್ಗೆ ಜಾಗೃತಗೊಳಿಸಲು ಆದಿವಾಸಿಗಳು ಇಂದು ಹೋರಾಟ ನಡೆಸುತ್ತಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಪ್ರೊ. ಕೆ.ಎಂ. ಲೋಕೆಶ್ ಅವರು ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ದೌರ್ಜನ್ಯಗಳು ಭಾರತದ ವಿಭಜನೆಯ ಸಮಯದಲ್ಲೂ ಕಂಡುಬಂದಿದೆ. ಮಹಿಳೆಯರ ಸಬಲೀಕರಣದ ಬಗ್ಗೆ ಗಮನ ಹರಿಸಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು.  

ಕಾರ್ಯಕ್ರಮವನ್ನು ಆಯೋಜಿಸಿದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಅನಿತಾ ರವಿಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ಕೆನಡಾ ದೇಶದ ಆದಿವಾಸಿ ಮಹಿಳೆಯರ ಮೇಲೆ ನಡೆಯುತ್ತಿರುವ ವರ್ಣಬೇಧವು ಬಹುಸಾಂಸ್ಕೃತಿಕತೆಯ ಆಶಯಕ್ಕೆ ತದ್ವಿರುದ್ಧವಾಗಿದ್ದು, ಅಲ್ಲಿಯ ಪರಿಸ್ಥಿತಿಯ ಹಾಗೂ ಮಹಿಳೆಯರ ಹೋರಾಟಗಳ ಅಧ್ಯಯನವು ಭಾರತದ ಆದಿವಾಸಿಗಳ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಹಕಾರಿಯಾಗಿವೆ ಎಂದರು.

ಮಹಿಳಾ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕಿ. ಕಿಶೋರಿ ನಾಯಕ್ ರವರು ವಂದಿಸಿದರು.  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News