ಆಮೆನಡಿಗೆಯಲ್ಲಿ ಸಾಗುತ್ತಿದೆ ಪಂಪ್‌ವೆಲ್-ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ

Update: 2016-12-04 18:35 GMT

ಮಂಗಳೂರು, ಡಿ.4: ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಆಮೆನಡಿಗೆಯಲ್ಲಿ ಸಾಗುತ್ತಿದೆ. ಇದರಿಂದ ವಾಹನದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಯಾಣಿಕರು ಅತೀವ ಸಮಸ್ಯೆ ಎದುರಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯೊಂದಿಗೆ ಪ್ರಮುಖ ಜಂಕ್ಷನ್‌ಗಳಲ್ಲಿ ಫ್ಲೈಓವರ್ ನಿರ್ಮಿಸಲಾಗುತ್ತಿದ್ದು, ಮಂಗಳೂರು ನಗರದ ಪ್ರವೇಶ ದ್ವಾರ ಎಂದೇ ಹೇಳಲಾಗುತ್ತಿದ್ದ ಪಂಪ್‌ವೆಲ್‌ನ ಮಹಾವೀರ ವೃತ್ತವನ್ನು ಕೆಡವಿ ಅಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಜೈನ ಸಂಘಟನೆಗಳ ವಿರೋಧವಿತ್ತು. ಈ ಕುರಿತು ಹಿರಿಯ ಅಧಿಕಾರಿಗಳು ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಸಂಘಟನೆಗಳ ನಾಯಕರು ಮಹಾವೀರ ವೃತ್ತದ ತೆರವಿಗೆ ಸಮ್ಮತಿ ಸೂಚಿಸಿದ್ದರು. ಅದರಂತೆ ಕಳೆದ ವರ್ಷ ಈ ವೃತ್ತವನ್ನು ತೆರವುಗೊಳಿಸಿ ಫ್ಲೈಓವರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಒಂದು ವರ್ಷವಾದರೂ ನಿರ್ಮಾಣ ಕಾರ್ಯ ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ.

ಇಲ್ಲಿ 600 ಮೀ. ಉದ್ದದ ಮತ್ತು 20 ಮೀ. ಅಗಲದ ದ್ವಿಪಥದ ಫ್ಲೈಓವರ್ ನಿರ್ಮಿಸಲಾಗುತ್ತಿದ್ದು, ಇದು ಹೆದ್ದಾರಿ ರಸ್ತೆಗಿಂತ ಐದುವರೆ ಮೀ. ಎತ್ತರದಲ್ಲಿದೆ. ಸದ್ಯ ಇಲ್ಲಿ ಐದು ಬೃಹತ್‌ಗಾತ್ರದ ಪಿಲ್ಲರ್ ಅಳವಡಿಸಲಾಗಿದ್ದು, ಇನ್ನೂ ಕೆಲವು ಪಿಲ್ಲರ್‌ಗಳು ನಿರ್ಮಾಣವಾಗಬೇಕಿದೆ. ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಫ್ಲೈಓವರ್ ಕಾಮಗಾರಿಯೂ ಕುಂಟುತ್ತಾ ಸಾಗಿದೆ. ಇಲ್ಲಿ 600 ಮೀ. ಉದ್ದದ ಮತ್ತು 20 ಮೀ. ಅಗಲದ ಫ್ಲೈಓವರ್ ನಿರ್ಮಾಣವಾಗುತ್ತಿದ್ದು, ಶೇ.60ರಷ್ಟು ಕಾಮಗಾರಿ ಇನ್ನೂ ಬಾಕಿ ಇದೆ.
ಎರಡೂ ಫ್ಲೈಓವರ್‌ಗಳು 2017ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಸದ್ಯದ ಕಾಮಗಾರಿಯ ಸ್ಥಿತಿಗತಿಯನ್ನು ಗಮನಿಸಿದರೆ ಇದು ಕಷ್ಟಸಾಧ್ಯ.

ಹೆಚ್ಚುತ್ತಿರುವ ವಾಹನ ದಟ್ಟಣೆ
 ರಾ.ಹೆ.ಗಳಲ್ಲಿ ದಿನದಿಂದ ದಿನಕ್ಕೆ ವಾಹನ ಗಳ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಫ್ಲೈಓವರ್ ಮತ್ತು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುವ ಕಡೆಗಳಲ್ಲಿ ಇದರ ದಟ್ಟಣೆ ಅಧಿಕವಾಗಿದೆ. ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಟ್ರಾಫಿಕ್ ಜಾಮ್‌ನಿಂದಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ.
ಉಳ್ಳಾಲ-ಮಾಣಿ ರಸ್ತೆಯಾಗಿ ಮಂಗಳೂರಿಗೆ ಬರುವ ಬಸ್‌ಗಳಿಗೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನೇರ ತಿರುವು ಪಡೆಯಲು ಸಾಧ್ಯವಿಲ್ಲ. ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಶ್ರೀನಿವಾಸ ಮಲ್ಯ ವೃತ್ತದಿಂದ ಎಡಕ್ಕೆ ತಿರುಗಿ ನೇರ ಹೆದ್ದಾರಿ ಮೂಲಕ ತೆರಳಿ ಉಳ್ಳಾಲ ಕ್ರಾಸ್ ಬಳಿ ತಿರುಗಿ ಮಂಗಳೂರಿಗೆ ಬರುವಂತೆ ಸಂಚಾರಮಾರ್ಪಾಟು ಮಾಡಲಾಗಿದೆ. ಆದರೆ ಇದನ್ನು ಸಮರ್ಪಕ ಪಾಲಿಸದೆ ಬಸ್, ಲಾರಿಯಂತಹ ಘನವಾಹನಗಳು ಎರ್ರಾಬಿರ್ರಿಯಾಗಿ ಸಂಚರಿಸುತ್ತವೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಲ್ಲುವುದು ಅನಿವಾರ್ಯವಾಗಿದೆ.
ಒಟ್ಟಿನಲ್ಲಿ ಉಳ್ಳಾಲ, ತಲಪಾಡಿ, ಕೊಣಾಜೆ ಮತ್ತಿತರೆಡೆಯಿಂದ ಮಂಗಳೂರಿಗೆ ಬರುವ ವಾಹನ ಸವಾರರಿಗೆ, ಪ್ರಯಾಣಿಕರಿಗೆ ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಫ್ಲೈಓವರ್‌ನ ಆಮೆನಡಿಗೆಯ ಕಾಮಗಾರಿಯು ಸಮಸ್ಯೆಯಾಗಿ ಕಾಡುತ್ತಿದೆ. ಸಕಾಲದಲ್ಲಿ ಇದು ಪೂರ್ಣಗೊಳ್ಳದಿದ್ದರೆ ಪ್ರಯಾಣಿಕರು ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ.

ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿ ರುವ ಮಂಗಳೂರಿಗೆ ಈ ಎರಡೂಜಂಕ್ಷನ್‌ನ ಫ್ಲೈಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಒಳ್ಳೆಯ ಬೆಳೆವಣಿಗೆಯಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ತಾಳ್ಮೆ ವಹಿಸುವುದು ಅನಿವಾರ್ಯವಾದರೂ ಅದು ವಿಳಂಬಗೊಂಡಷ್ಟು ಸಮಸ್ಯೆ ಹೆಚ್ಚಾಗಲಿವೆ. ಹಾಗಾಗಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುವಂತಾಗಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೂಕ್ತ ಕ್ರಮ ಜರಗಿಸಬೇಕು.
-ರವೀಶ್, ತೊಕ್ಕೊಟ್ಟು


ಫ್ಲೈಓವರ್ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಸಾಗಬೇಕು. ಸಾರ್ವಜನಿಕರು ಅದರಲ್ಲೂ ಹೆಂಗಸರು, ವೃದ್ಧರು, ಮಕ್ಕಳು ಇಲ್ಲಿ ರಸ್ತೆ ದಾಟಲು ಪರದಾಡುವುದನ್ನು ಕಾಣುವಾಗ ಬೇಸರವಾಗುತ್ತದೆ. ಜನರ ತಾಳ್ಮೆ ಪರೀಕ್ಷಿಸುವುದಕ್ಕೂ ಮಿತಿ ಬೇಕು.
-ಬಶೀರ್, ಕುತ್ತಾರ್

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News