ಕಸ್ಬಾ ಬೆಂಗ್ರೆ: ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ

Update: 2016-12-05 11:17 GMT

ಮಂಗಳೂರು, ಡಿ.5 : ಜಮಾಅತೆ ಇಸ್ಲಾಮೀ ಹಿಂದ್, ಸಮಾಜ ಸೇವಾ ಘಟಕದ ಕಸ್ಬಾ ಬೆಂಗ್ರೆ ಶಾಖೆಯ ವತಿಯಿಂದ ಕೆಎಂಸಿ ಆಸ್ಪತ್ರೆಯ ಸಹಕಾರದೊಂದಿಗೆ ಬೆಂಗ್ರೆಯ ಏ.ಆರ್.ಕೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೋನಾಲಿ ಸಿಂಗ್, ಓರ್ವ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ, ಆತನ ಮೂಲಕ ಮೂವರಿಗೆ ಜೀವದಾನ ಮಾಡಬಹುದು. ಇದರಿಂದಾಗಿ ರಕ್ತದಾನಿಯು ಕೂಡ ಆರೋಗ್ಯವಂತನಾಗಿರುವುದಲ್ಲದೆ, ರಕ್ತ ಪಡೆದ ವ್ಯಕ್ತಿಗಳ ಜೀವವನ್ನು ಕಾಪಾಡಿದ ಸಾಧನೆ ಮಾಡಿದಂತಾಗುತ್ತದೆ ಎಂದರು.

ರಕ್ತದಾನವು ಇಂದು ಅವಶ್ಯಕವಾಗಿದ್ದು, ರಕ್ತದ ಕೊರತೆಯಿಂದ ಹಲವಾರು ಮಂದಿ ಜೀವ ಕಳೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ರಕ್ತದ ಕೊರತೆಯನ್ನು ನೀಗಿಸಬೇಕಾದರೆ ಪ್ರತಿಯೋರ್ವರೂ ರಕ್ತದಾನದ ಮಹತ್ವವನ್ನು ಅರಿತುಕೊಂಡು ರಕ್ತದಾನ ಶಿಬಿರ ಅಥವಾ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್ ಭೇಟಿ ನೀಡಿ, ಮೂರು ತಿಂಗಳಿಗೊಮ್ಮೆ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವಂತೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ಸಮಾಜ ಸೇವಾ ಘಟಕದಂತಹಾ ಹಲವಾರು ಸಂಘ-ಸಂಸ್ಥೆಗಳೊಂದಿಗೆ ಕೆಎಂಸಿ ಆಸ್ಪತ್ರೆಯು 24*7 ಕಾರ್ಯ ನಿರ್ವಹಿಸಲು ಸದಾ ಮುಂದಾಗಿರುತ್ತದೆ ಎಂದರು.


ಸನ್ಮಾನ ಕಾರ್ಯಕ್ರಮ:
ಇದೇ ವೇಳೆ ಕಳೆದ 10-15 ವರುಷಗಳಿಂದ 50ಕ್ಕೂ ಹೆಚ್ಚು ಜೀವರಕ್ಷಣೆ ಮಾಡಿ, ಜಲದುರಂತದ ಸಂದರ್ಭ 150ಕ್ಕೂ ಅಧಿಕ ಶವಗಳನ್ನು ಪತ್ತೆಹಚ್ಚಿ ನಿಸ್ವಾರ್ಥ ಸೇವೆ ಮಾಡುತ್ತಿರುವ, ತಣ್ಣೀರುಬಾವಿಯ ಜೀವ ರಕ್ಷಕರೆಂದೇ ಖ್ಯಾತಿ ಪಡೆದಿರುವ ಯೂತ್ ಸ್ಫೋಟ್ಸ್ ಕ್ಲಬ್ ನ ಐವರು ಸದಸ್ಯರಾದ ಮುಹಮ್ಮದ್ ವಾಸಿಂ, ಸಾದಿಕ್, ಜಾವಿದ್, ಝಾಕೀರ್ ಹುಸೈನ್ ಹಾಗೂ ಹಸನ್ ಟಿ.ಪಿ. ಮತ್ತು ಅತಿಹೆಚ್ಚು ಬಾರಿ ರಕ್ತದಾನ ಮಾಡುತ್ತಾ ತಮ್ಮದೇ ರೀತಿಯಲ್ಲಿ ಸಮಾಜ ಸೇವೆಗೈಯುತ್ತಿರುವ ಕಸ್ಬಾ ಬೆಂಗ್ರೆ ನಿವಾಸಿಗಳಾದ ನಝೀರ್ ಅಹ್ಮದ್ ಹಾಗೂ ಮುಹಮ್ಮದ್ ಅಸ್ಲಂರಿಗೆ ಸಮಾಜ ಸೇವಾ ಘಟಕದ ವತಿಯಿಂದ ಸನ್ಮಾನ ಮಾಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಾ ಘಟಕದ ಮುಹ್ಸಿನ್ ಕಂದಕ್ ವಹಿಸಿದ್ದರು.

ಈ ಸಂದರ್ಭ ಬೆಂಗ್ರೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್, ವೆಲ್ಫೇರ್ ಪಾರ್ಟಿಯ ಕರ್ನಾಟಕ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲ್ಯಾನ್, ಎಸ್ ಡಿಪಿಐ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಮುಹಮ್ಮದ್ ಮುನೀಬ್, ಡಿವೈಎಫ್ ಐ ಬೆಂಗ್ರೆ ಅಧ್ಯಕ್ಷ ಮುಹಮ್ಮದ್ ನೌಶಾದ್, ಕರೀಂ ಬೆಂಗ್ರೆ, ಇಸ್ಮಾಯೀಲ್ ಉಸ್ತಾದ್ ಕೆ.ಪಿ. ಮತ್ತಿತರರು ಉಪಸ್ಥಿತರಿದ್ದರು. 
ಮೌಲಾನ ಮುಹಮ್ಮದ್ ಶುಕ್ರುದ್ದೀನ್ ಕಿರಾಅತ್ ಪಠಿಸಿದರು. ಇರ್ಷಾದ್ ವೇಣೂರ್ ನಿರೂಪಿಸಿದರು.      
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News