ಖಾಸಗಿಯವರಿಂದ ಕಟ್ಟಡ ನಿರ್ಮಾಣ : ನಿರಾಕರಣೆಗೆ ಅಬ್ದುಲ್ಲ ಸಾಹೇಬರ ಸಂಬಂಧಿಕ ಮನವಿ

Update: 2016-12-05 17:51 GMT

ಉಡುಪಿ, ಡಿ.5: ದಿ.ಖಾನ್ ಬಹದ್ದೂರ್ ಹಾಜಿ ಅಬ್ದುಲ್ ಸಾಹೇಬರು ದಾನವಾಗಿ ನೀಡಿರುವ ಉಡುಪಿ ಸರಕಾರಿ ಆಸ್ಪತ್ರೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಕಟ್ಟಡ ನಿರ್ಮಿಸಲು ಅನುಮತಿ ನೀಡದಂತೆ ಆಕ್ಷೇಪ ವ್ಯಕ್ತಪಡಿಸಿರುವ ಹಾಜಿ ಅಬ್ದುಲ್ ಸಾಹೇಬರ ಸೋದರ ಸಂಬಂಧಿ ಖುರ್ಷಿದ್ ಅಹ್ಮದ್, ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಪೊನ್ನು ರಾಜ್ ಅವರಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.

1929ರಲ್ಲಿ ಮೂಡನಿಡಂಬೂರು ಗ್ರಾಮದಲ್ಲಿ ಒಟ್ಟು 4.07 ಎಕರೆ ಜಮೀನನ್ನು ಹಾಜಿ ಅಬ್ದುಲ್ ಸಾಹೇಬರು ತನ್ನ ಜೀವಿತಾವಧಿಯಲ್ಲಿ ಸರಕಾರಿ ಮಹಿಳೆಯರ ಹೆರಿಗೆ ಆಸ್ಪತ್ರೆ, ತಂದೆ ಖಾಜಿ ಖಾಸಿಂ ಬುಡಾನ್ ಸಾಹೇಬರ ಹೆಸರಿನಲ್ಲಿ ಮಕ್ಕಳ ಆಸ್ಪತ್ರೆ ಮತ್ತು ವೈದ್ಯರಿಗೆ, ನರ್ಸ್‌ಗಳಿಗೆ ವಸತಿ ಕಟ್ಟಡವನ್ನು ನಿರ್ಮಿಸಿ ದಾನ ಪತ್ರ ಬರೆದು ಅಂದಿನ ತಾಲೂಕು ಬೋರ್ಡ್‌ಗೆ ನೀಡಿದ್ದರು.

ಈ ಜಮೀನು ಸರಕಾರಿ ಆಸ್ಪತ್ರೆಯಾಗಿ ಉಳಿಯುವಂತೆ ಮತ್ತು ಈ ಆಸ್ಪತ್ರೆಗೆ ತನ್ನ ಮತ್ತು ತಂದೆಯ ಹೆಸರನ್ನು ಶಾಶ್ವತವಾಗಿ ಇಡುವಂತೆ ಅವರು ಅದರಲ್ಲಿ ಸೂಚಿಸಿದ್ದರು. ಈ ಕಟ್ಟಡದ ಉದ್ದೇಶವನ್ನು ಬದಲಾವಣೆ ಮಾಡದಂತೆ ಮತ್ತು ಜಮೀನಿನಲ್ಲಿ ಕಟ್ಟಡವನ್ನು ನಿರ್ಮಿಸಿ ಅದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಮತ್ತು ಆಸ್ಪತ್ರೆಗೆ ಬೇಕಾಗುವ ಪುಸ್ತಕ ಭಂಡಾರವನ್ನು ನೀಡಿರುವುದಾಗಿ ದಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದೀಗ ಅವರ ಉದ್ದೇಶದಂತೆ ಈ ಜಮೀನಿನಲ್ಲಿ ಸರಕಾರವೇ ನೇರವಾಗಿ ಕಟ್ಟಡ ನಿರ್ಮಿಸದೆ ಖಾಸಗಿಯರಿಗೆ ವಹಿಸಿಕೊಡಲಾಗುತ್ತಿದೆ. ಆ ಮೂಲಕ ದಾನಿಯೊಬ್ಬರ ಉದ್ದೇಶವನ್ನು ಬದಲಾವಣೆ ಮಾಡಲಾಗುತ್ತಿದೆ. ಆದುದರಿಂದ ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಕಟ್ಟಡ ನಿರ್ಮಿ ಸಲು ಅನುಮತಿ ನೀಡಬಾರದು. ಈ ಕುರಿತು ನ್ಯಾಯಾಲಯದಿಂದ ತಡೆಯಾಜ್ಞೆ ತರಲು ನಾನು ನಿರ್ಧರಿಸಿದ್ದೇನೆ ಎಂದು ಖುರ್ಷಿದ್ ಅಹ್ಮದ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ದಾನ ಪತ್ರವನ್ನು ಉಡುಪಿ ನೋಂದಣಿ ಕಚೇರಿಯಿಂದ ತರಿಸಿ ಅದರಲ್ಲಿ ವಿಧಿಸಿದ ಷರತ್ತನ್ನು ಪರಿಶೀಲಿಸಬೇಕು. ಈ ಷರತ್ತುಗಳನ್ನು ಉಲ್ಲಂಘಿಸಿದರೆ ಈ ಜಮೀನು ಮತ್ತೆ ನನ್ನ ಅಂದಿನ ಸಂತತಿಗೆ ಮರಳುವುದಾಗಿ ಹಾಜಿ ಅಬ್ದುಲ್ಲಾ ದಾನಪತ್ರದಲ್ಲಿ ತಿಳಿಸಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಈ ಜಮೀನನ್ನು ಕೇಳುವುದಿಲ್ಲ. ನಮ್ಮ ಹಿರಿಯರು ವಿಧಿಸಿದ ಷರತ್ತಿನಂತೆ ಈ ಜಮೀನಿನಲ್ಲಿ ಸರಕಾರಿ ಆಸ್ಪತ್ರೆ ಉಳಿಯಬೇಕೆಂಬುದು ನಮ್ಮ ಕುಟುಂಬದ ಆಶಯ ಎಂದು ಮನವಿ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News