ಮಣ್ಣಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಸಚಿವ ಪ್ರಮೋದ್

Update: 2016-12-05 18:20 GMT

ಬ್ರಹ್ಮಾವರ, ಡಿ.5: ಜಗತ್ತಿನ ಸಮಸ್ತ ಜೀವಸಂಕುಲಗಳು ಉಳಿದಿರುವುದೇ ಮಣ್ಣಿನಿಂದ. ಪ್ರಪಂಚದಲ್ಲಿರುವ 600 ಕೋಟಿ ಜನರು ಹಾಗೂ ಪ್ರಾಣಿಸಂಕುಲ ತಮ್ಮ ಉಳಿವಿಗಾಗಿ ಮಣ್ಣನ್ನೇ ಅವಲಂಬಿಸಿದೆ. ಹೀಗಾಗಿ ಈ ಮಣ್ಣಿನ ಆರೋಗ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಸೋಮವಾರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ, ಜಿಲ್ಲಾ ಕೃಷಿ ಇಲಾಖೆ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಇವರ ಸಹಯೋಗದಲ್ಲಿ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಂಗವಾಗಿ ನಡೆದ ‘ವಿಶ್ವ ಮಣ್ಣು ಆರೋಗ್ಯ ದಿನಾಚರಣೆ’ಯಲ್ಲಿ ಮಣ್ಣು ಪರೀಕ್ಷೆಯ ವಿಧಾನ ಹಾಗೂ ಮಹತ್ವದ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭ ಸಚಿವರು ರೈತರ ಜಮೀನಿನ ಮಣ್ಣು ಪರೀಕ್ಷೆಯ ವರದಿಯ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ಸಂಬಂಧಿಸಿದ ರೈತರಿಗೆ ವಿತರಿಸಿದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಮಣ್ಣು ಆರೋಗ್ಯ ಪೋಸ್ಟರ್ ಬಿಡುಗಡೆಗೊಳಿಸಿದರೆ, ಜಿಪಂ ಸದಸ್ಯ ಜನಾರ್ದನ ತೋನ್ಸೆ ಮಣ್ಣು ಆರೋಗ್ಯ ಕರಪತ್ರ ಬಿಡುಗಡೆಗೊಳಿಸಿದರು.

ಜಿಪಂ ಸದಸ್ಯ ಮೈರ್ವಾಡಿ ಸುಧಾಕರ ಶೆಟ್ಟಿ, ತಾಪಂ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಭುಜಂಗ ಶೆಟ್ಟಿ, ಸುಶೀಲಾ, ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ ನಾಯಕ್, ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ. ಹನುಮಂತಪ್ಪ, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ಉಪಸ್ಥಿತರಿದ್ದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್ ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯ್ಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಸಹಾಯಕ ಸಂಜೀವ ಕ್ಯಾತಪ್ಪನವರ ನಿರೂಪಿಸಿದರು. ಕೆವಿಕೆ ಕಾರ್ಯಕ್ರಮ ಸಂಯೋಜಕ ಡಾ.ಬಿ.ಧನಂಜಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News