ಸಲೀಂ ಮದನಿ ಯೋಜನೆಗೆ ವಿನಯಕುಮಾರ್ ಸೊರಕೆ ಮೆಚ್ಚುಗೆ

Update: 2016-12-06 13:37 GMT

ಮಂಗಳೂರು, ಡಿ. 6: ಉಚ್ಚಿಲ ಸಮೀಪದ ಎಲ್ಲೂರು ಹಿರಾನಗರದಲ್ಲಿ 6 ಎಕರೆ ಪ್ರದೇಶದಲ್ಲಿ 100 ಮಂದಿ ಬಡವರಿಗೆ ಮನೆ ನಿರ್ಮಿಸಿಕೊಡುವ ದಾರುಲ್ ಅಮಾನ್‌ನ ಮುಖ್ಯಸ್ಥ ಸಲೀಂ ಮದನಿ ಕುತ್ತಾರು ಅವರ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು, ಅಭಿವೃದ್ಧಿ ಕೆಲಸಗಳಿಗೆ ಪ್ರಥಮ ಆದ್ಯತೆ ನೆಲೆಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅವರು ದಾರುಲ್ ಅಮಾನ್ ಎಜುಕೇಶನಲ್ ಅಕಾಡಮಿ ವತಿಯಿಂದ ಎಲ್ಲೂರಿನ ಹಿರಾನಗಲ್ಲಿ ಸೋಮವಾರ ನಡೆದ ‘ಮೀಲಾದ್ ಜಲ್ಸಾ -2016’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಅನಾಥರ ಹಾಗೂ ಕಡುಬಡವರ ಬಗ್ಗೆ ಕಾಳಜಿಯನ್ನು ವಹಿಸಿ ಅವರಿಗೆ ಸೂರು ಕಲ್ಪಿಸಿಕೊಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸಲೀಂ ಮದನಿ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ರಕ್ಷಣಾ ಕವಚವಾಗಿ ನಿಂತಿದ್ದಾರೆ. ಗುರಿ ಅಥವಾ ಉದ್ದೇಶಗಳ ಈಡೇರಿಕೆಗೆ ಯೋಜನೆಗಳು ಹಲವಾರು ಇದ್ದರೂ ದೂರದೃಷ್ಟಿ ಅತ್ಯಗತ್ಯವಾಗಿದೆ. ಈ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿ, ಕೋರಿಕೆಯನ್ನು ಸರಕಾರಕ್ಕೆ ಸಲ್ಲಿಸಿದರೆ ಅನುದಾನ ಪಡೆಯಲು ಅವಕಾಶ ಇರುತ್ತದೆ. ಶಾಸಕನ ನೆಲೆಯಲ್ಲಿ ಸಂಸ್ಥೆಯ ಯೋಜನೆಗೆ ಎಲ್ಲಾ ಸಹಕಾರವನ್ನು ನೀಡುವುದಾಗಿ ಶಾಸಕರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ದಾರುಲ್ ಅಮಾನ್ ಎಜುಕೇಶನಲ್ ಅಕಾಡಮಿಯ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ದುವಾ ನೆರವೇರಿಸಿ, ಮಜ್ಲಿಸ್‌ನ ನೇತೃತ್ವ ವಹಿಸಿದ್ದರು. ಉಚ್ಚಿಲ ಜುಮಾ ಮಸೀದಿಯ ಖತೀಬ್ ಇಸ್ಹಾಖ್ ಫೈಝಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ಮೂಡಬಿದ್ರೆಯ ಮುಈನುಸ್ಸುನ್ನ ಸಂಸ್ಥೆಯ ಮುದರ್ರಿಸ್ ನೌಫಲ್ ಸಖಾಫಿ ಕಳಸ ಮಾತನಾಡಿ, ನೂತನ ವಾದಗಳಿಗೆ ಕಿವಿಗೊಡದೆ, ಸುನ್ನತ್ ಆಶಯಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮಿನ ಹೆಸರಿನಲ್ಲಿ ಹರಿದಾಡುತ್ತಿರುವ ಬರಹಗಳ ಪೈಕಿ ಎಲ್ಲವೂ ಸತ್ಯವಲ್ಲ. ಈ ಬರಹಗಳನ್ನು ಇತರರಿಗೆ ರವಾನಿಸುವಾಗ ಎಚ್ಚರಿಕೆ ವಹಿಸುವಂತೆ ಅವರು ಯುವ ಜನತೆಗೆ ಕಿವಿಮಾತು ಹೇಳಿದರು.

 ವೌಲಾನ ಉವೈಸ್ ಮಂಝರಿ ಹುಬ್ಬಳ್ಳಿ ಮಾತನಾಡಿ, ದೇವರ ಸ್ಮರಣೆ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇಹ-ಪರ ಲೋಕದಲ್ಲಿ ವಿಜಯಿಯಾಗಲು ಸಾಧ್ಯವಿದೆ ಎಂದರು.

ದಾರುಲ್ ಅಮಾನ್ ಎಜುಕೇಶನಲ್ ಅಕಾಡಮಿಯ ಜನರಲ್ ಮ್ಯಾನೇಜರ್ ಅಲ್‌ಹಾಜ್ ಸಲೀಂ ಮದನಿ ಕುತ್ತಾರು, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ಎಸೆಸೆಫ್ ಉಡುಪಿ ಜಿಲ್ಲಾಧ್ಯಕ್ಷ ಪಿ.ಎಂ.ಅಶ್ರಫ್ ಅಂಜದಿ, ಉಡುಪಿ ಜಿ.ಪಂ. ಸದಸ್ಯೆ ಶಿಲ್ಪ ಸುವರ್ಣ, ಮುಹಮ್ಮದ್ ಗೌಸ್, ಗುಲಾಂ ಮುಹಮ್ಮದ್, ಯಶವಂತ ಶೆಟ್ಟಿ, ಯು.ಸಿ.ಶೇಖಬ್ಬ ಉಚ್ಚಿಲ, ರಹೀಂ ಕುಂಜೂರು, ಹಾಜಿ ಎಂ.ಎಸ್.ರಝಾಕ್, ಮಯ್ಯದ್ದಿ, ಎನ್.ಎಚ್.ಸಿರಾಜ್ ಉಚ್ಚಿಲ್, ಅಡ್ವಕೇಟ್ ಹಂಝತ್ ಹೆಜಮಾಡಿ, ಉಸ್ಮಾನ್, ಉಡುಪಿ ಜಿಲ್ಲಾ ಮೀನುಗಾರಿಕಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಗಂಗಾಧರ ಸುವರ್ಣ, ಗಂಗಾಧರ ಕಾಪು, ಹಾಜಿ ಸಮೀವುಲ್ಲಾಹ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News