ಕಳ್ಳತನ ಸೊತ್ತು ಮಾರಾಟಕ್ಕೆ ಯತ್ನ : ಇಬ್ಬರ ಬಂಧನ

Update: 2016-12-10 14:08 GMT

ಬಂಟ್ವಾಳ, ಡಿ. 10: ಅಂಗಡಿಯೊಂದರಲ್ಲಿ ಕಳ್ಳತನ ನಡೆಸಿದ ಮಾಲುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ತಿಂಗಳಾಡಿಯ ವೀರಕಂಬ ಗ್ರಾಮದ ಪಾತ್ರತೋಟ ನಿವಾಸಿ ಮುಹಮ್ಮದ್ ಫಯಾರ್ ಯಾನೆ ಫಯ್ಯಾ(20), ಕೋಟೆಕಾರು ಕೆ.ಸಿ.ರೋಡ್ ನಿವಾಸಿ ಯಾಹ್ಯಾ(26) ಬಂಧಿತ ಆರೋಪಿಗಳು.

ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಬಂಧಿತರಲ್ಲಿ ಓರ್ವ ಆರೋಪಿ ಪುತ್ತೂರು ರಾಜಧಾನಿ ಜುವೆಲ್ಲರಿಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಎಂದು ತಿಳಿದು ಬಂದಿದೆ ಎಂದು ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಅಂಗಡಿಯೊಂದಕ್ಕೆ ಸಿಗರೇಟ್ ಪ್ಯಾಕ್‌ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ವಿಟ್ಲ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ವೀರಕಂಬ ಗ್ರಾಮದ ಶಿಬ್ಲಾಜೆ ಎಂಬಲ್ಲಿಯ ಉಮ್ಮರ್ ಎಂಬವರ ದಿನಸಿ ಅಂಗಡಿಯಿಂದ ಮೂರು ಸಾವಿರ ನಗದು ಹಾಗೂ ಎರಡು ಸಾವಿರ ರೂ. ಮೌಲ್ಯದ ಸಾಮಾಗ್ರಿಗಳು ಕಳ್ಳತನ ನಡೆಸಿದ ಬಗ್ಗೆ ಒಪ್ಪಿಕೊಂಡಿದ್ದಾರೆ.

ಆರೋಪಿ ಫಯಾಜ್ 2015ರಲ್ಲಿ ಪುತ್ತೂರು ರಾಜಧಾನಿ ಜುವೆಲ್ಲರಿ ಶೂಟೌಟ್ ಪ್ರಕರಣದ ಆರೋಪಿಯಾಗಿದ್ದಾನೆ. ಈತ ರಾಜಧಾನಿ ಶೂಟೌಟ್ ಪ್ರಕರಣದ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಊರಿಗೆ ಮರಳಿ ಯಾಹ್ಯಾ ಜೊತೆ ಸೇರಿ ಕಳ್ಳನತ ಕೃತ್ಯಕ್ಕೆ ಇಳಿದಿರುವುದಾಗಿ ತನಿಖೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆ, ಅಡಿಶನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ರವೀಶ್ ಸಿ.ಆರ್, ಮಾರ್ಗದರ್ಶನದಲ್ಲಿ ಬಂಟ್ವಾಳ ಸಿಪಿಐ ಮಂಜಯ್ಯ, ವಿಟ್ಲ ಎಸೈ ಪ್ರಕಾಶ್ ದೇವಾಡಿಗರವರ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News