6 ತಿಂಗಳ ಬಳಿಕ ದರೋಡೆಕೋರರು ಪೊಲೀಸ್ ವಶಕ್ಕೆ
ಬೆಳ್ತಂಗಡಿ, ಡಿ.12 : ಉಜಿರೆ ಪೇಟೆಯಲ್ಲಿರುವ ದಮಾಸ್ ಜ್ಯುವೆಲ್ಲರಿ ಅಂಗಡಿಯ ಶಟರ್ ಮುರಿದು ಜೂ. 10 ರಂದು ರಾತ್ರಿ ಕಳವಿಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧುಗಿರಿ ತುಮಕೂರು ಮೇಕೆ ಬಂಡೆಮನೆ ನಿವಾಸಿಗಳಾದ ಮಂಜುನಾಥ ಯಾನೆ ಕೋಳಿ ಮಂಜ (49) ಹಾಗೂ ಮಹಂತೇಶ್ (21) ಎಂಬವರೇ ಬಂಧಿತ ಆರೋಪಿಗಳು.
ಆರೋಪಿಗಳ ಪತ್ತೆಗಾಗಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ, ಉಪಾಧೀಕ್ಷಕ, ಬೆಳ್ತಂಗಡಿ ವೃತ್ತ ನಿರೀಕ್ಷಕ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಎಸ್‌ಐ ರವಿ ಬಿ.ಎಸ್. ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಬಲೆ ಬೀಸಿದ್ದರು.
ಈ ಬಗ್ಗೆ ವಿಶೇಷ ಮಾಹಿತಿ ಕಲೆ ಹಾಕಿ ಮಧುಗಿರಿ ಎಂಬಲ್ಲಿಂದ ಡಿ. 11ರಂದು ವಶಕ್ಕೆ ಪಡೆದುಕೊಂಡು ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಚರಣೆಯಲ್ಲಿ ಎ.ಎಸ್.ಐ ಕರುಣಾಕರ, ಮಂಗಳೂರು ಬೆರಳು ಮುದ್ರೆ ಘಟಕದ ತಜ್ಞ ಸತೀಶ್ ಬಿ ಎನ್ ಹಾಗೂ ಸಿಬ್ಬಂದಿಗಳು, ಬೆಳ್ತಂಗಡಿ ಸಿಬ್ಬಂದಿಗಳಾದ ಕನಕರಾಜ್, ಧರ್ಮಪಾಲ, ಶಿವರಾಮ ರೈ, ನಾಗರಾಜ್, ಕೃಷ್ಣ, ಯತೀಂದ್ರ, ಹರೀಶ್, ಸತೀಶ್, ಚಾಲಕ ಹರೀಶ್ ಸಹಕರಿಸಿದ್ದರು.