ರಾಜ್ಯದ ಕಿರಣ್, ಶಿಖಾ 2ನೆ ಸುತ್ತಿಗೆ

Update: 2016-12-14 18:46 GMT

ಉಡುಪಿ, ಡಿ.14: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮತ್ತು ಮಣಿಪಾಲ ವಿವಿಗಳ ಜಂಟಿ ಆಶ್ರಯದಲ್ಲಿ ಉಡುಪಿ ಮತ್ತು ಮಣಿಪಾಲಗಳಲ್ಲಿ ನಡೆದಿರುವ 41ನೆ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 19 ವರ್ಷದೊಳಗಿನ ಬಾಲಕ-ಬಾಲಕಿಯರ ಸಿಂಗಲ್ಸ್‌ನಲ್ಲಿ ಕರ್ನಾಟಕದ ಕಿರಣ್ ಬಿ. ಹಾಗೂ ಅಗ್ರಸೀಡ್ ಶೀಖಾ ಗೌತಮ್ ಸುಲಭ ಜಯದೊಂದಿಗೆ 2ನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ಶೀಖಾ ಗೌತಮ್ ಅವರು ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ದಿಲ್ಲಿಯ ನಮಿತಾ ಪಥಾನಿಯಾ ಅವರನ್ನು 21-11, 21-9ರಿಂದ ಸುಲಭವಾಗಿ ಸೋಲಿಸಿದರು. ಬಾಲಕರ ವಿಭಾಗದಲ್ಲಿ ಕಿರಣ್ ಬಿ. ಅವರು ಮಧ್ಯಪ್ರದೇಶದ ಎಮ್ಸನ್ ಸಿಂಗ್ ಅವರನ್ನು ಮೂರು ನಿಕಟ ಗೇಮ್‌ಗಳಲ್ಲಿ 21-19, 19-21, 24-21ರ ಅಂತರದಿಂದ ಮಣಿಸಿ ಮುನ್ನಡೆ ಸಾಧಿಸಿದರು.

19 ವರ್ಷದೊಳಗಿನ ಬಾಲಕರ ಅಗ್ರಸೀಡ್ ಲಕ್ಷಾ ಸೇನ್ ಅವರು ದಿಲ್ಲಿಯ ಅರ್ಜುನ್ ಸಚ್‌ದೇವ್‌ರನ್ನು 21-7, 21-13ರ ಅಂತರದಿಂದ ಹಿಮ್ಮೆಟ್ಟಿಸಿದರು. ಆಂಧ್ರ ಪ್ರದೇಶದ ಪ್ರಣಯ್ ಆರ್. ಅವರು ಬಿಹಾರದ ಶುಭನಂ ಕುಮಾರ್ ಅವರನ್ನು 21-11, 21-17ರಿಂದ ಸೋಲಿಸಿದರು.

17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕರ್ನಾಟಕ ಸಾಯಿ ಪ್ರತೀಕ್ ಕೃಷ್ಣ ಪ್ರಸಾದ್ ಅವರು ದಿಲ್ಲಿಯ ವಿಕಾಸ್ ಯಾದವ್ ಅವರನ್ನು 21-15, 21-17ರಿಂದ ಮಣಿಸಿದರೆ, ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ತ್ರಿಷಾ ಹೆಗ್ಡೆ ಮತ್ತು ನೇಹಾ ಹರೀಶ್ ತಮ್ಮ ಎದುರಾಳಿಗಳ ಕೈಯಲ್ಲಿ ಪರಾಜಿತರಾದರು.

19 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕನಾಟಕದ ಅರ್ಚನಾ ಪೈ ಅವರು ಚಂಡೀಗಡದ ಅರುಣಿ ಚವ್ಹಾಣ್‌ರನ್ನು 21-9, 21-17ರಿಂದ ಸೋಲಿಸಿದರೆ, ಬಾಲಕರ ವಿಭಾಗದಲ್ಲಿ ರಘು ಎಂ. ಅವರು ಪಂಜಾಬ್‌ನ ಸಂಜಯ್‌ಶ್ರೀವಾಸ್ತವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News