ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ

Update: 2016-12-15 16:52 GMT

ಉಳ್ಳಾಲ , ಡಿ.15 : ತಲಪಾಡಿಯಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಗುರುವಾರ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಅಮಾಯಕರ ಬಿಡುಗಡೆಗಾಗಿ ಒತ್ತಾಯಿದರು. ಕಳೆದ ನವೆಂಬರ್ 23ರಂದು ರಾತ್ರಿ ತಲಪಾಡಿಯಲ್ಲಿ ಮಂಜೇಶ್ವರದ ಉದ್ಯಾವರ ಮಾಡ ನಿವಾಸಿ ಇಮಾದ್(28)ಮತ್ತು ಕಡಂಬಾರ್ ನಿವಾಸಿ ಅಶ್ರಫ್(35)ಅವರು ಮಂಗಳೂರಿನಿಂದ ತಲಪಾಡಿಗೆ ಕಡೆಯ ಟ್ರಿಪ್ ನಡೆಸಿ ರಾತ್ರಿ 10.00 ಗಂಟೆಯ ವೇಳೆಗೆ ಕೆಳಗಿನ ತಲಪಾಡಿಯಲ್ಲಿ ಬಸ್ಸನ್ನು ನಿಲುಗಡೆ ಮಾಡಿ ಕೆಳಗಿಳಿದಿದ್ದು,ಈ ವೇಳೆ ಇವರಿಬ್ಬರ ಮೇಲೆ ಸುಮಾರು ಮೂವತ್ತರಷ್ಟು ಜನರಿದ್ದ ತಂಡವು ಎರಗಿ ಬಿಯರ್ ಬಾಟಲಿ, ತಲವಾರು, ಸೋಂಟೆ ಮತ್ತು ಕೈಗಳಿಂದ ಮಾರಣಾಂತಿಕವಾಗಿ ಹಲ್ಲೆಗೈದು ಪರಾರಿಯಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ವಾರದ ಹಿಂದೆ ಉಳ್ಳಾಲ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅನುಮಾನದ ಮೇರೆಗೆ ತಲಪಾಡಿ ರಾಮಭಜನಾ ಮಂದಿರ ಬಳಿ ನಿವಾಸಿ ಧ್ರುವ(24) ಎಂಬಾತನನ್ನೂ ಬಂಧಿಸಿದ್ದಾರೆ. ಧ್ರುವನ ಬಂಧನದ ವಿಚಾರ ಅರಿತ ಹಿಂದೂ ಸಂಘಟನೆ ಕಾರ್ಯಕರ್ತರು, ಬಿಜೆಪಿ ಮುಖಂಡರು ಗುರುವಾರ ಸಂಜೆ ಉಳ್ಳಾಲ ಠಾಣೆಯಲ್ಲಿ ಜಮಾಯಿಸಿ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ಪರಿಸ್ಥಿತಿಯ ಗಂಭೀರತೆ ಮನಗಂಡ ಪೊಲೀಸರು ಧ್ರುವನ ಮೇಲೆ ನವೆಂಬರ್ 24ರಂದು ತಲಪಾಡಿಯಲ್ಲಿ ವರುಣ್ ರಾಜ್ ಎಂಬವರ ಮೇಲೆ ನಡೆದ ಹಲ್ಲೆಯ ಆರೋಪ ಹೊರಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಹಿಂದೂ ಸಂಘಟನೆ ಮುಖಂಡರಾದ ಸುಭಾಷ್ ಪಡೀಲ್, ಪವಿತ್ರ ಕೆರೆಬೈಲ್, ವಿಜಯ್ ಪ್ರಕಾಶ್ ಕುಂಪಲ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News