ಡಿ.23ರಿಂದ ಕರಾವಳಿ ಉತ್ಸವ: ಡಿಸಿ

Update: 2016-12-16 18:00 GMT

ಮಂಗಳೂರು, ಡಿ.16: ದ.ಕ. ಜಿಲ್ಲಾ ಕರಾವಳಿ ಉತ್ಸವವನ್ನು ಡಿ.23ರಿಂದ ಜ.1ರವರೆಗೆ ಆಯೋಜಿಸಲು ಜಿಲ್ಲಾ ಕರಾವಳಿ ಉತ್ಸವ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆದ ಕರಾವಳಿ ಉತ್ಸವ ಸಮಿತಿಯ ತಯಾರಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಉತ್ಸವವನ್ನು ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ, ಪಣಂಬೂರು ಕಡಲ ತೀರದಲ್ಲಿ ಏರ್ಪಡಿಸಲಾಗಿದ್ದು, ಡಿ.23ರಂದು ಸಂಜೆ 4ಕ್ಕೆ ಕರಾವಳಿ ಉತ್ಸವದ ಅಂಗವಾಗಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಸಚಿವ ಬಿ.ರಮಾನಾಥ ರೈ, ವಸ್ತು ಪ್ರದರ್ಶನದ ಉದ್ಫಾಟನೆಯನ್ನು ನೆರವೇರಿಸಲಿದ್ದು, ಅಂದು ಸಂಜೆ 4:30ಕ್ಕೆ ಕರಾವಳಿ ಉತ್ಸವ ಮೈದಾನದಿಂದ ಕದ್ರಿ ಉದ್ಯಾನವನದವರೆಗೆ ಕರಾವಳಿ ಉತ್ಸವದ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಸಚಿವ ಯು.ಟಿ.ಖಾದರ್ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ ಎಂದರು.

 ಸಂಜೆ 6ಕ್ಕೆ ಕದ್ರಿ ಉದ್ಯಾನವನದಲ್ಲಿ ಕರಾವಳಿ ಉತ್ಸವದ ಉದ್ಫಾಟನಾ ಸಮಾರಂಭವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಕಲೈಯಮಾಮಣಿ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್ ನೆರವೇರಿಸಲಿದ್ದು, ಉತ್ಸವದ ಅಂಗವಾಗಿ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಉದ್ಯಾನವನದಲ್ಲಿ ಪ್ರತಿದಿನ ಸಂಜೆ 6ಕ್ಕೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿ.29 ಹಾಗೂ 30ರಂದು ಸಂಜೆ 5ಕ್ಕೆ ಕದ್ರಿ ಉದ್ಯಾನವನದಲ್ಲಿ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಡಿ.24ರಂದು ಬೆಳಗ್ಗೆ 9:30ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ಪ್ರೌಢ ಮತ್ತು ಪಪೂ ಕಾಲೇಜು ವಿದ್ಯಾರ್ಥಿಗಳಿಗೆ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು, ಡಿ.31ರಂದು ಬೆಳಗ್ಗೆ 10ಕ್ಕೆ ಕರಾವಳಿ ಮೈದಾನದಲ್ಲಿ ಜಿಲ್ಲಾಮಟ್ಟದ ಪುರುಷರ ಮುಕ್ತ ಹಾಕಿ ಪಂದ್ಯಾಟ ನಡೆಯಲಿದೆ. ಜ.1ರಂದು ಬೆಳಗ್ಗೆ 9ಕ್ಕೆ ಲೇಡಿಹಿಲ್‌ನ ಮನಪಾ ಈಜುಕೊಳದಲ್ಲಿ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

 ಡಿ.30 ಮತ್ತು ಜ.1ರಂದು ಪಣಂಬೂರು ಕಡತ ಕಿನಾರೆಯಲ್ಲಿ ಬೀಚ್ ಉತ್ಸವವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ ವಿವಿಧ ಕ್ರೀಡಾ ಪಂದ್ಯಾಟಗಳು ಜರಗಲಿದ್ದು, ಸಂಜೆ ಆಹಾರೋತ್ಸವ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಾಳಿಪಟ ಸ್ಪರ್ಧೆ, ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದವರು ನುಡಿದರು.

ಜ.1ರಂದು ಸಂಜೆ 6ಕ್ಕೆ ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಸಮಾರೋಪ ಹಾಗೂ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯಲಿವೆ. ಬಿ.ರಮಾನಾಥ ರೈ, ಕರಾವಳಿ ಉತ್ಸವದ ಸಮಾರೋಪ ಸಮಾರಂಭ ಹಾಗೂ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಭೆಯಲ್ಲಿ ಮನಪಾ ಮೇಯರ್ ಹರಿನಾಥ್, ಅಪರ ಜಿಲ್ಲಾಧಿಕಾರಿ ಕುಮಾರ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News