ಮುಡಿಪು: ಜನಶಿಕ್ಷಣ ಟ್ರಸ್ಟ್‌ನಲ್ಲಿ ಜಿಲ್ಲಾ ಮಟ್ಟದ ಅಕ್ಷರೋತ್ಸವ- 2016

Update: 2016-12-19 12:34 GMT

ಕೊಣಾಜೆ, ಡಿ.19 :  ಸ್ವಚ್ಛತೆ ವಿಚಾರದಲ್ಲಿ ಸರ್ಕಾರವನ್ನು ಕಾಯುವ ಬದಲು ಸ್ಥಳೀಯಾಡಳಿತ ಸಂಸ್ಥೆಗಳೇ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಕಾರ್ಯಾಚರಿಸಿದಲ್ಲಿ ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಭಿಪ್ರಾಯಪಟ್ಟರು.

   

ಅವರು ಮಾದರಿ ಗ್ರಾಮಾಭಿವೃದ್ಧಿ ಆಂದೋಲನ ಪ್ರಯುಕ್ತ ಸಮಾಜ ಕಾರ್ಯ ಸಂಸ್ಥೆ ಜನಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ, ಅಪ್ನಾದೇಶ್, ಸೆಲ್ಕೋ ಫೌಂಢೇಶನ್, ಸುಗ್ರಾಮ ಸಂಘ, ಚಿತ್ತಾರ ಬಳಗ, ಆದಿವಾಸಿ ಅಭಿವೃದ್ಧಿ ಸಂಘ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನವಸಾಕ್ಷರರ ಸಂಘಟನೆಯ 25ನೇ ವರ್ಷಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಅಕ್ಷರೋತ್ಸವ- 2016 ಹಾಗೂ ಸೋಲಾರ್ ಸಂಪನ್ಮೂಲ ಕೇಂದ್ರದ ಉದ್ಘಾಟನೆಯನ್ನು ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.  

ಸೋಲಾರ್ ದೀಪ ಬೆಳಗಿಸಿದ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ರೊನಾಲ್ಡ್ ಫೆರ್ನಾಂಡಿಸ್ ಮಾತನಾಡಿ, ಜನಶಿಕ್ಷಣ ಟ್ರಸ್ಟ್‌ನಿಂದ ಸಾವಿರಾರು ಮಂದಿ ಅಕ್ಷರ ಜ್ಞಾನ ಪಡೆದಿದ್ದಾರೆ. ನಮ್ಮ ಮನೆ ಪರಿಸರ ಸ್ವಚ್ಛವಾಗಿಟ್ಟಲ್ಲಿ ಇತರರೂ ಅದನ್ನು ಅನುಸರಿಸಬಹುದು, ಸೋಲಾರ್ ಅಳವಡಿಕೆಯಿಂದ ವಿದ್ಯುತ್ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.  

ಸೆಲ್ಕೋ ಫೌಂಡೇಶನ್‌ನ ಎಜಿಎಂ ಗುರುಪ್ರಕಾಶ್ ಮಾತನಾಡಿ, ಯಾವುದೇ ಯೋಜನೆಗಳು ನಗರ ಪ್ರದೇಶದಿಂದ ಆರಂಭಗೊಳ್ಳುತ್ತದೆ. ಆದರೆ ಸೋಲಾರ್ ಯೋಜನೆ ಗ್ರಾಮೀಣ ಭಾಗದಿಂದ ಆರಂಭಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಸೋಲಾರ್ ಯೋಜನೆ ರೂಪಿಸಲಾಗುತ್ತಿದ್ದು ಯಾವುದೇ ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ತೊಂದರೆಯಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಂಯೋಜಕಿ ಭಾಗೀರಥಿ ರೈ, ಮಣಿಪಾಲ ಸಮುದಾಯ ಭವನದ ಸಂಯೋಜಕ ಶ್ಯಾಂ ಭಟ್, ಅಪ್ನಾದೇಶ್‌ನ ಅಶೋಕ್ ಭಟ್, ಶಿಕ್ಷಣ ಪ್ರೇಮಿ ರಮೇಶ್ ಶೇಣವ, ಆಕಾಶವಾಣಿ ನಿರೂಪಕಿ ಫ್ಲೋರಿನ್ ರೋಸ್, ಸುರಿಬೈಲ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬೂಬಕ್ಕರ್, ನವಸಾಕ್ಷರರು, ವಿವಿಧ ಸಂಘಟನೆ ಪ್ರಮುಖರು, ಮುದುಂಗಾರುಕಟ್ಟೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.

ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News