ಸರಕಾರದ ನೀತಿಗಳಿಂದ ರೈತರ ಆತ್ಮಹತ್ಯೆ ಹೆಚ್ಚಳ : ಸಚಿವೆ ಶೈಲಜಾ ಟೀಚರ್

Update: 2016-12-19 15:15 GMT

ಕುಂದಾಪುರ, ಡಿ.19: ಈಗಿನ ಕೇಂದ್ರ ಸರಕಾರ ಕಾರ್ಪೊರೇಟ್ ಕಂಪೆನಿ ಗಳಿಗೆ ಹೆಚ್ಚು ಹೆಚ್ಚು ಸಬ್ಸಿಡಿ ಕೊಡುತ್ತಿದ್ದು, ಕೃಷಿ ರಂಗಕ್ಕೆ ಸಬ್ಸಿಡಿಯನ್ನು ಕಡಿತ ಮಾಡುತ್ತಿದೆ. ಇದರ ಪರಿಣಾಮ ದೇಶದಲ್ಲಿ ಬಹುಕೋಟಿ ಶ್ರೀಮಂತರ ಸಂಖ್ಯೆ ಹೆಚ್ಚಳವಾಗುತ್ತಿದೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಯಲ್ಲೂ ಏರಿಕೆ ಕಾಣುತ್ತಿದೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಆರೋಪಿಸಿದ್ದಾರೆ.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮೂರು ದಿನಗಳ ಆರನೆ ಕೃಷಿ ಕೂಲಿಕಾರರ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯನ್ನು ಶನಿವಾರ ಕುಂದಾಪುರದ ನೆಹರು ಮೈದಾನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಆರ್ಥಿಕ ಸ್ಥಿತಿ ತೀರಾ ಬಿಕ್ಕಟ್ಟಿನಲ್ಲಿದೆ. ಪಾಳೆಗಾರಿಕೆ ಪ್ರವೃತ್ತಿ, ಶೋಷಣೆ ಇಂದು ಕೂಡ ಮುಂದುವರಿದಿದೆ. ಜಾತಿ ಆಧಾರಿತ ತಾರತಮ್ಯ, ಆರ್ಥಿಕ ಶೋಷಣೆ ಹಾಗೂ ಬಂಡವಾಳಶಾಹಿ ಶೋಷಣೆ ಜೊತೆಯಾಗಿ ಸಾಗುತ್ತಿವೆ. ಇದನ್ನು ನಿವಾರಿಸಲು ಯಾವುದೇ ಸರಕಾರಗಳನ್ನು ಕ್ರಮ ಕೈಗೊಂಡಿಲ್ಲ ಎಂದವರು ಟೀಕಿಸಿದರು.

1990ರಲ್ಲಿ ನವ ಉದಾರೀಕರಣದ ನೀತಿ ಜಾರಿಗೆ ಬಂದ ಪರಿಣಾಮ ದೇಶದ ರೈತರು ಸಂಕಷ್ಟಕ್ಕೆ ಒಳಗಾಗಿ ಅಂದಿನಿಂದ ಇಂದಿನವರೆಗೆ 2,96,438 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014-15ರಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಶೇ.40ರಷ್ಟು ಹೆಚ್ಚಳ ಕಂಡಿತು. 2014ರಲ್ಲಿ ಮಹಾರಾಷ್ಟ್ರದಲ್ಲಿ ಶೇ.18ರಷ್ಟು ರೈತರ ಆತ್ಮಹತ್ಯೆ ಏರಿಕೆಯಾಯಿತು. ಕರ್ನಾಟಕದಲ್ಲಿ 2011ರಲ್ಲಿ 321 ಮತ್ತು 2015ರಲ್ಲಿ 1300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಯಾವುದೇ ಪರ್ಯಾಯ ವ್ಯವಸ್ಥೆ ಹಾಗೂ ಪೂರ್ವ ಸಿದ್ಧತೆ ಮಾಡದೆ ಏಕಾಏಕಿ ನೋಟು ರದ್ಧತಿ ಮಾಡಿದ ಪರಿಣಾಮ ಜನರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಧಾರ್ಮಿಕ ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ನಡೆಸುತ್ತಿದ್ದಾರೆ. ದೇಶದ ಜನ ಇಂದು ಆರ್ಥಿಕ ಹಾಗೂ ಧಾರ್ಮಿಕ ಕಾರಣಕ್ಕಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಮೂಲಕ ಸಾಮಾಜಿಕ ಸ್ವಸ್ಥವನ್ನು ಹಾಳು ಮಾಡಲಾಗುತ್ತಿದೆ ಎಂದು ಅವರು ದೂರಿದರು.

ಯಾವ ಆಹಾರ ತಿನ್ನಬೇಕು ಎಂಬುದನ್ನು ಕೆಲ ಶಕ್ತಿಗಳು ನಿರ್ಧರಿಸುವ ಕೆಲಸ ಮಾಡುತ್ತಿವೆ. ಅದನ್ನು ದಿಕ್ಕರಿಸುವವರನ್ನು ನಿರ್ಧಾಕ್ಷಿಣ್ಯವಾಗಿ ಕೊಲೆ ಮಾಡಲಾಗುತ್ತಿದೆ. ದನದ ಮಾಂಸ ತಿನ್ನುವ ಕಾರಣಕ್ಕೆ ದಾರುಣವಾಗಿ ಹತ್ಯೆ ಮಾಡುವ ಪರಿಸ್ಥಿತಿ ಈ ದೇಶದಲ್ಲಿದೆ. ಪುರೋಹಿತಶಾಹಿಯ ವರ್ಣಾಶ್ರಮ ವ್ಯವಸ್ಥೆಯು ಸಮಾಜದ ನೆಮ್ಮದಿಯನ್ನು ಹಾಳು ಮಾಡಲಾಗುತ್ತಿದೆ. ಸಂಘ ಪರಿವಾರದ ಈ ಕಾರ್ಯ ಯೋಜನೆಗಳನ್ನು ವಿಫಲಗೊಳಿಸಲು ಹೋರಾಟ ನಡೆಸಬೇಕು ಎಂದರು.

ನವದೆಹಲಿ ಎಐಎಡಬ್ಲುಯು ಪ್ರಧಾನ ಕಾರ್ಯದರ್ಶಿ ಎ.ವಿಜಯ ರಾಘವನ್ ಮಾತನಾಡಿ, ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳು ಜನವಿರೋಧಿ ನೀತಿಯಿಂದ ಬಡವರ ಮೇಲೆ ದಾಳಿ ಮಾಡು ತ್ತಿವೆ.ಆಹಾರ, ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಬಡವರಿಗೆ ಸಿಗದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಸರಕಾರ ಬಡವರು ಆಹಾರ ಕೇಳಿದರೆ ಭಜನೆ ಮಾಡಲು ಹೇಳುತ್ತದೆ, ಬಿಪಿಎಲ್ ಕಾರ್ಡ್ ಕೇಳಿದರೆ ಕ್ರೆಡಿಟ್ ಕಾರ್ಡ್ ಕೊಡುತ್ತದೆ, ಇನ್ನು ಉದ್ಯೋಗ ಕೇಳಿದರೆ ಬ್ಯಾಂಕ್ ಎದುರು ಕ್ಯೂ ನಿಲ್ಲಿಸುತ್ತದೆ ಎಂದು ಕಟುವಾಗಿ ಟೀಕಿಸಿದರು.

ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಭೆ ಸೃಷ್ಠಿಸುವ ಬಿಜೆಪಿ ಇದೀಗ ಗೋರಕ್ಷಕರು ಎಂಬ ಹೊಸ ಸೇರ್ಪಡೆಯನ್ನು ಮಾಡಿಕೊಂಡಿದೆ. ಈ ಗೋ ರಕ್ಷಕರು ದಲಿತರ ಮೇಲೆ ದಾಳಿಯನ್ನು ನಡೆಸುತ್ತಿದ್ದಾರೆ. ದಲಿತರನ್ನು ಗೋವು ಗಳಿಗಿಂತ ಕೀಳಾಗಿ ಹಿಂಸೆಗೆ ಒಳಪಡಿಸಲಾಗುತ್ತದೆ. ಇದಕ್ಕೆ ನರೇಂದ್ರ ಮೋದಿ ಸರಕಾರ ಸಂಪೂರ್ಣ ಬೆಂಬಲ ನೀಡುತ್ತಿದೆಂದು ಅವರು ಆರೋಪಿಸಿದರು.

ಮಾಜಿ ಶಾಸಕ, ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಮಾತನಾಡಿ, ಕೇಂದ್ರದಲ್ಲಿರುವ ಮೋದಿ ಸರಕಾರ ನೀಡಿರುವ ಅಂಕಿ ಅಂಶ ಗಳ ಪ್ರಕಾರ ಈ ದೇಶದಲ್ಲಿ ಶೇ.48ರಷ್ಟು ಮಂದಿ ಮನೆ ನಿವೇಶನ ಇಲ್ಲ. ಶೇ.31ರಷ್ಟು ಮಂದಿಗೆ ಕೃಷಿ ಮಾಡಲು ಭೂಮಿ ಇಲ್ಲ. ಶೇ.49.5ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುತ್ತಿದ್ದಾರೆ. ಆದರೆ ಮೋದಿ ಇದನ್ನು ಪರಿಹರಿಸಲು ಯಾವುದೇ ಸರ್ಜಿಕಲ್ ದಾಳಿ ನಡೆಸಿಲ್ಲ. ಅದು ಬಿಟ್ಟು ಅವರ ನೋಟು ರದ್ಧತಿಯ ಮೂಲಕ ಬಡವರ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಿದರು.

 ತಾವು ದುಡಿದ ಹಣ ಪಡೆಯಲು ಜನರನ್ನು ಬ್ಯಾಂಕಿನ ಎದುರು ನಿಲ್ಲಿಸುವ ಮೂಲಕ ಈ ದೇಶದ ಜನರನ್ನು ಮೋದಿ ಕಳ್ಳರನ್ನಾಗಿಸಿದ್ದಾರೆ. ಕಪ್ಪು ಹಣ ವಾಪಾಸ್ಸು ತರುವ ಮೋದಿ ಹೇಳಿಕೆ ಐತಿಹಾಸಿಕ ಸುಳ್ಳು. ಈ ದೇಶದ ಕಪ್ಪು ಹಣದಲ್ಲಿ ಶೇ.95ರಷ್ಟು ಆಸ್ತಿ ರೂಪದಲ್ಲಿದೆ. ಕಪ್ಪು ಹಣ ಇರುವವರು ಇಂದು ಸುರಕ್ಷಿತವಾಗಿದ್ದಾರೆ. ನರೇಂದ್ರ ಮೋದಿಗೆ ಧೈರ್ಯ ಇದ್ದರೆ ಭೂಮಾಲಕರಲ್ಲಿರುವ ಭೂಮಿಯನ್ನು ಬಡವರಿಗೆ ಹಂಚುವ ಕಾರ್ಯ ಮಾಡಲಿ ಎಂದು ಅವರು ಸವಾಲು ಹಾಕಿದರು.

ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ ವಹಿಸಿದ್ದರು.

ಎಐಎಡಬ್ಲುಯುನ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಕೆ.ಶಂಕರ್ ಸ್ವಾಗತಿಸಿದರು.

ಎಐಎಡಬ್ಲುಯು ಪ್ರಧಾನ ಕಾರ್ಯ ದರ್ಶಿ ಚಂದ್ರಪ್ಪ ಹೊಸ್ಕೇರಾ ವಂದಿಸಿದರು.

ಸಮಿತಿಯ ಪ್ರಧಾನ ಕಾರ್ಯ ದರ್ಶಿ ವೆಂಕಟೇಶ್ ಕೋಣಿ ಕಾರ್ಯಕ್ರಮ ನಿರೂಪಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News