ಬಂಟ್ವಾಳ :ವಿದ್ಯಾರ್ಥಿ ಸಹಿತ ಇಬ್ಬರಿಗೆ ಚೂರಿ ಇರಿತ, ದುಷ್ಕರ್ಮಿಗಳ ಬಂಧನಕ್ಕೆ ಪಿಎಫ್‌ಐ ಆಗ್ರಹ

Update: 2016-12-19 16:12 GMT

ಬಂಟ್ವಾಳ, ಡಿ. 19: ಮದುವೆಗೆ ತೆರಳಿ ಮರಳುತ್ತಿದ್ದ ವಿದ್ಯಾರ್ಥಿ ಸಹಿತ ಇಬ್ಬರನ್ನು ಅಡ್ಡಗಟ್ಟಿ ಕೊಲೆಗೆ ಯತ್ನಿಸಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ಕಾರ್ಯದರ್ಶಿ ಸಲೀಂ ಕುಂಪನ ಮಜಲು ಪೊಲೀಸರನ್ನು ಆಗ್ರಹಿಸಿದ್ದಾರೆ.

ಮದುವೆ ಕಾರ್ಯ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದ ವಿದ್ಯಾರ್ಥಿ ಸಹಿತ ಇಬ್ಬರು ಯುವಕರನ್ನು ಅಡ್ಡಗಟ್ಟಿದ ಇನ್ನೊಂದು ಬೈಕ್‌ನಲ್ಲಿ ಬಂದ ಮೂವರ ತಂಡ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಲ್ಪನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಮಲ್ಲೂರು ಬದ್ರಿಯಾ ನಗರದ ನಿವಾಸಿ, ಲಾರಿ ಚಾಲಕ ಅಬ್ಬಾಸ್ ಎಂಬವರ ಪುತ್ರ ಜುನೈದ್(17) ಮತ್ತು ಬಿ.ಸಿ.ರೋಡ್ ಶಾಂತಿ ಅಂಗಡಿ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಸಿನಾನ್(18) ಚೂರಿ ಇರಿತದಿಂದ ಗಾಯಗೊಂಡವರು. ಇವರಿಬ್ಬರು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುನೈದ್ ಮತ್ತು ಸಿನಾನ್ ಸೋಮವಾರ ಗುರುಪುರ ಕೈಕಂಬದ ಪ್ರಿಮಿಯಂ ಹಾಲ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮವನ್ನು ಮುಗಿಸಿ ಬೈಕ್‌ನಲ್ಲಿ ಮರಳುತ್ತಿದ್ದಾಗ ಆರ್‌ಎಕ್ಸ್ 100 ಬೈಕ್‌ನಲ್ಲಿ ಬಂದ ಮೂವರು ಕಳ್ಳಿಗೆ ಗ್ರಾಮದ ಕಲ್ಪನೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಮೂವರ ಪೈಕಿ ಬೈಕ್‌ನಿಂದ ಇಳಿದ ಇಬ್ಬರು ಜುನೈದ್ ಮತ್ತು ಸಿನಾನ್‌ಗೆ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾ ಚೂರಿಯಿಂದ ಇರಿದಿದ್ದಾರೆ. ಈ ವೇಳೆ ಪರಿಸ್ಥಿತಿಯ ಗಾಂಭೀರ್ಯತೆ ಅರಿತ ಅವರಿಬ್ಬರು ತಮ್ಮ ಬೈಕ್‌ನಲ್ಲೇ ಆರೋಪಿಗಳಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಂತಕರಿಂದ ತಪ್ಪಿಸಿಕೊಂಡ ಜುನೈದ್ ಮತ್ತು ಸಿನಾನ್ ಕಲಾಯಿಗೆ ಬಂದು ಅಲ್ಲಿನ ಜನರಲ್ಲಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗನ್ನು ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಚೂರಿ ಇರಿತದಿಂದ ಜುನೈದ್‌ನ ಬಲ ಕೈಗೆ ಹಾಗೂ ಸಿನಾನ್ ಕುತ್ತಿಗೆಗೆ ಆಳವಾದ ಗಾಯ ಉಂಟಾಗಿದೆ. ಜುನೈದ್ ಬೆಂಜನಪದವು ಸರಕಾರಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದು ಸಿನಾನ್ ಮಂಗಳೂರಿನ ಬೇಕರಿಯೊಂದರಲ್ಲಿ ಉದ್ಯೋಗದಲ್ಲಿದ್ದಾನೆ. ಬೈಕ್‌ನಲ್ಲಿ ಬಂದು ಚೂರಿ ಇರಿದು ಪರಾರಿಯಾದ ಮೂವರ ಪೈಕಿ ಇಬ್ಬರ ಗುರುತು ಜುನೈದ್‌ಗಿದ್ದು ಚೂರಿಯಿಂದ ಇರಿದ ಬಳಿಕವೂ ದುಷ್ಕರ್ಮಿಗಳು ಇಬ್ಬರನ್ನು ಬೆನ್ನಟ್ಟಿ ಬಂದಿದ್ದಾರೆ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಮಂಗಳೂರು ಕಮಿಷನರ್ ಚಂದ್ರಶೇಖರ್, ಜಿಲ್ಲಾ ಹೆಚ್ಚುವರಿ ಎಸ್ಪಿ ಸಿ.ಬಿ.ವೇದಮೂರ್ತಿ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್., ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ಆಸ್ಪತ್ರೆಗೆ ಭೇಟಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳ ಹಾಗೂ ತಾಲೂಕಿನ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸ್ಪಿ ತಾಲೂಕಿನಲ್ಲಿ ಮೊಕ್ಕಂ ಹೂಡಿದ್ದಾರೆ.

♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News