ಜಿಲ್ಲಾ ಕರಾವಳಿ ಉತ್ಸವದಲ್ಲಿ ಸಾಂಸ್ಕೃತಿಕ ಮೆರವಣಿಗೆ

Update: 2016-12-21 13:13 GMT

ಮಂಗಳೂರು, ಡಿ.21: ರಾಜ್ಯ ಮತ್ತು ಪಶ್ಚಿಮ ಕರಾವಳಿಯನ್ನು ಪ್ರತಿಬಿಂಬಿಸುವ ಎಲ್ಲ ಭಾಷೆ, ಧರ್ಮ, ಜೀವನ ಸಂಸ್ಕೃತಿ, ಜನಪದ, ದೇವಾಲಯ ಸಂಸ್ಕೃತಿ ಯಕ್ಷಗಾನ ಇತ್ಯಾದಿ ಸುಮಾರು 70ಕ್ಕೂ ಹೆಚ್ಚು ತಂಡಗಳ ಸಾಂಸ್ಕೃತಿಕ ಮೆರವಣಿಗೆ - ದಿಬ್ಬಣದೊಂದಿಗೆ ಡಿ.23ರಂದು ಜಿಲ್ಲಾ ಕರಾವಳಿ ಉತ್ಸವಕ್ಕೆ ಚಾಲನೆ ಸಿಗಲಿದೆ. ಅಂದು ಸಂಜೆ 4ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ಸಚಿವ ಯು.ಟಿ. ಖಾದರ್ ಸಾಂಸ್ಕೃತಿಕ ಮೆರವಣಿಗೆಯನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತಿತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಮೆರವಣಿಗೆಯು ಕರಾವಳಿ ಉತ್ಸವ ಮೈದಾನದಿಂದ ಹೊರಟು ಹ್ಯಾಟ್‌ಹಿಲ್ ಪಂಪ್‌ಹೌಸ್ ಮುಂಭಾಗ, ರಾಮಕೃಷ್ಣ ವಿದ್ಯಾರ್ಥಿ ನಿಲಯ, ಗಣೇಶ್ ಬೀಡಿ ಕಾಂಪೌಂಡ್, ಪೂಂಜಾ ಬಿಲ್ಡಿಂಗ್, ಕಲ್ಯಾಣ್ ಜ್ಯುವೆಲ್ಲರಿ, ಬಳ್ಳಾಲ್‌ಭಾಗ್ ಸರ್ಕಲ್‌ನಲ್ಲಿ ಹಿಂದಿರುಗಿ ಎಸ್.ಡಿ.ಎಂ. ನೇತ್ರಾಲಯ, ಸುರೇಶ್ ಬಲ್ಲಾಳರ ಮನೆ, ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗ, ಮಹಾತ್ಮಾಗಾಂಧಿ ವೃತ್ತ, ಲಾಲ್‌ಭಾಗ್, ಕೆಎಸ್ಸಾರ್ಟಿಸಿ ಬಿಜೈ ಸರ್ಕಲ್, ಬಿಜೈ ಬಟ್ಟಗುಡ್ಡ, ಸರ್ಕ್ಯೂಟ್ ಹೌಸ್ ಜಂಕ್ಷನ್, ಕದ್ರಿ ಪಾರ್ಕ್ ರಸ್ತೆಯಲ್ಲಿ ಮುಂದುವರಿದು ಕದ್ರಿ ಉದ್ಯಾನವನದ ಒಳಗಡೆ ಇರುವ ಕರಾವಳಿ ಉತ್ಸವ ವೇದಿಕೆಯ ಎರಡು ಪಾರ್ಶ್ವಗಳಲ್ಲಿ ಸಂಪನ್ನಗೊಳ್ಳಲಿದೆ.

ಮೆರವಣಿಗೆಯಲ್ಲಿ ಮಂಗಳವಾದ್ಯ, ತಟ್ಟಿರಾಯ, ಪಕ್ಕಿನಿಶಾನೆ, ಕೊಂಬು, ಚೆಂಡೆ, ರಣಕಹಳೆ, ಜಿಲ್ಲಾ ಪೊಲೀಸ್ ಬ್ಯಾಂಡ್, ಬಣ್ಣದ ಕೊಡೆಗಳು, ಬಸವ ತಂಡ, ಶಂಖದಾಸರು, ಕನ್ನಡ ಭುವೇಶ್ವರಿ ಸ್ತಬ್ಧ ಚಿತ್ರ, ಕೀಲು ಕುದುರೆ, ಕರಗ, ಕುಸ್ತಿಪಟುಗಳ ತಂಡ, ಹಾಸ್ಯಗೊಂಬೆ ತಂಡ, ದಪ್ಪು, ಅರೆಭಾಷೆ ಜನರ ಕುದುರೆ ಸವಾರಿ, ಒಪ್ಪಣಿ ತಂಡ, ಕೋಲ್ಕಳಿ, ಕೊಡವ ನೃತ್ಯ, ತಾಲೀಮು, ಮರಕಾಲು ಹುಲಿವೇಷ ಮತ್ತು ಹುಲಿವೇಷ, ಶಾರ್ದೂಲ - ಕರಡಿ ಕುಣಿತ, ಡೋಲು ಕುಣಿತ, ಆಟಿಕಳಂಜ, ಛತ್ರ ಕುಣಿತ, ಬೊಳ್ಗುಡೆ ನಲಿಕೆ, ಇರೆನಲಿಕೆ, ಪರಕೋಲು ನಲಿಕೆ, ಯಕ್ಷಗಾನ ವೇಷ, ಯಕ್ಷಗಾನದ ಬೃಹತ್ ಗೊಂಬೆ, ವೀರಭದ್ರ ಕುಣಿತ, ಬೇಡರಕುಣಿತ, ಮೈಸೂರು ನಗಾರಿ, ಗೊರವರ ಕುಣಿತ, ಡೊಳ್ಳು ಕುಣಿತ, ಜಗ್ಗಳಿಕೆ, ಫಟ್ಟಾಕುಣಿತ, ಪೂಜಾಕುಣಿತ, ಕಂಸಾಳೆ, ಮಹಿಳಾ ವೀರಗಾಸೆ, ಪುರವಂತಿಕೆ, ಸಿದ್ದಿ ದಮಾಮ್ ಕುಣಿತ, ಅಕ್ಕಮಹಾದೇವಿ, ವೀರಶೈವ ಮಹಿಳಾ ತಂಡ, ಹಾಲಕ್ಕಿ ಸುಗ್ಗಿ ಕುಣಿತ, ಕೋಲಾಟ, ಕಂಗೀಲು ನೃತ್ಯ, ಸೊಮನ ಕುಣಿತ ಇತ್ಯಾದಿ ಕಲಾತಂಡಗಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನಗೊಳ್ಳಲಿದೆ ಎಂದು ಜಿಲ್ಲಾ ಕರಾವಳಿ ಉತ್ಸವ ಮೆರವಣಿಗೆ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪತ್ರಿಕಾ ಪ್ರಕಟನೆುಲ್ಲಿ ತಿಳಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News