‘ಕಾರಂತರಂತೆ ಬದುಕಬೇಕು; ಕುವೆಂಪುವಂತೆ ಬರೆಯಬೇಕು’ : ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರುಗೆ ಅಭಿನಂದನೆ

Update: 2017-01-12 17:54 GMT

ಉಡುಪಿ, ಜ.12: ನನಗೆ ಡಾ.ಶಿವರಾಮ ಕಾರಂತರಂತೆ ಬದುಕಬೇಕು ಹಾಗೂ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಂಥ ಕಾದಂಬರಿಯೊಂದನ್ನು ಬರೆಯಬೇಕೆಂಬ ಮಹದಾಸೆ ಇದೆ.’ ಎಂದು ತಮ್ಮ ‘ಸ್ವಾತಂತ್ರದ ಓಟ’ ಬೃಹತ್ ಕಾದಂಬರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿರುವ ಖ್ಯಾತ ಕತೆಗಾರ, ಸಾಹಿತಿ ಬೊಳುವಾರು ಮಹಮದ್ ಕುಂಞ ಹೇಳಿದ್ದಾರೆ.

ಮಣಿಪಾಲ ವಿವಿಯ ಡಾ.ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠ ಹಾಗೂ ರಥಬೀದಿ ಗೆಳೆಯರು ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಇಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಬೊಳುವಾರು ಸಾಹಿತ್ಯ-ಸಂವಾದ-ಅಭಿನಂದನೆ ಕಾರ್ಯಕ್ರಮದಲ್ಲಿ ಗೆಳೆಯರು ಹಾಗೂ ಅಭಿಮಾನಿಗಳ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡುತಿದ್ದರು.

ನನಗೆ ಸ್ವಂತ ಊರಿಲ್ಲ, ಸ್ವಂತ ಮನೆಯಿಲ್ಲ. ಒಂಥರಾ ಇಂದಿನ 2000ರೂ. ಪಿಂಕ್ ನೋಟಿನ ಸ್ಥಿತಿ ನನ್ನದು ಎಂದು ಹೇಳಿದ ಬೊಳುವಾರು, ದೇಶಪ್ರೇಮ, ದೇಶಭಕ್ತಿಯ ಕುರಿತಂತೆ ಇಂದು ಮಾಡಲಾಗುತ್ತಿರುವ ವ್ಯಾಖ್ಯಾನವನ್ನು ಕಟು ವಾಗಿ ಟೀಕಿಸಿದರು.

ಸ್ವಾತಂತ್ರ ಓಟ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದರಿಂದ ಸರಕಾರದಿಂದ ಅಧಿಕೃತ ಮುದ್ರೆ ಬಿದ್ದಂತಾಗಿದೆ ಎಂದು ತಮಾಷೆಯಾಗಿ ಹೇಳಿದ ಬೋಳುವಾರು, ಇದರಲ್ಲಿ ಎಲ್.ಕೆ.ಅಡ್ವಾನಿ ಹಾಗೂ ಅವರ ತಂಗಿಯ ಹೆಸರು ಬಂದಿದೆ ಎಂದರು. ಕಾದಂಬರಿಯ ಮುಖ್ಯಪಾತ್ರವಾದ ಚಾಂದ್ ಅಲಿ ಅವರಿಗೆ ಕಾಡಿದ ಮಾತೃಭೂಮಿಯ ಪ್ರಶ್ನೆ ಎಲ್ಲರಿಗೂ ಮೂಡಬೇಕು ಎಂದರು.

ಇಂದು ಮನುಷ್ಯ ಪ್ರೀತಿಸುವುದನ್ನು ಮರೆತಿದ್ದಾನೆ. ಆದರೆ ಪೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳ ಮೂಲಕ ಧ್ವೇಷ ಮಾತ್ರ ಅತಿ ಸುಲಭದಲ್ಲಿ ಪಸರಿಸುತ್ತಿದೆ. ನೀವು ಈವರೆಗೆ ಕೇಳದ, ಕಾಣದವರನ್ನು ಕೂಡಾ ಇದರಲ್ಲಿ ಧ್ವೇಷಿಸಲಾಗುತ್ತಿದೆ. ಅದು ಯಾಕೆ ಎಂಬುದು ಯಾರಿಗೂ ಗೊತ್ತಿಲ್ಲ. ಧ್ವೇಷದ ಬದಲು ಅವರನ್ನು ಪ್ರೀತಿಸಲು ಸಾಧ್ಯವಿಲ್ಲವೇ ಎಂದು ಬೋಳುವಾರು ಮಾರ್ಮಿಕವಾಗಿ ಪ್ರಶ್ನಿಸಿದರು.

 ಪದವಿ ಶಿಕ್ಷಣದ ಬಳಿಕ ಸಿಂಡಿಕೇಟ್ ಬ್ಯಾಂಕಿನಲ್ಲಿ ದೊರೆತ ನೌಕರಿ, ಅಲ್ಲಿ ತಾನು ಕತೆ ಬರೆಯತೊಡಗಿದ್ದು, 1977ರಲ್ಲಿ ಮದುವೆಯಾದ ಮರುದಿನವೇ ಬಡ್ತಿಯೊಂದಿಗೆ ಮಣಿಪಾಲಕ್ಕೆ ವರ್ಗಾವಣೆಗೊಂಡು ಉಡುಪಿಗೆ ಬಂದು ಮುಂದೆ ಎರಡೂವರೆ ದಶಕ ಇಲ್ಲೇ ಉಳಿದಿದ್ದು, ಆರಂಭದಲ್ಲಿ ತಾನು ಬಾಡಿಗೆ ಮನೆ ಸಿಗಲು ಪರದಾಡಿದ್ದನ್ನು, ಇಲ್ಲಿ ಬ್ಯಾಂಕಿನ ಅಧ್ಯಕ್ಷ ಕೆ.ಕೆ.ಪೈ, ಬನ್ನಂಜೆ ಗೋವಿಂದಾಚಾರ್ಯರು, ಕು.ಶಿ.ಹರಿದಾಸ ಭಟ್ಟರು ನೀಡಿದ ಪ್ರೋತ್ಸಾಹವನ್ನು ತುಂಬು ಹೃದಯದಿಂದ ಸ್ಮರಿಸಿಕೊಂಡರು.

ಡಾ.ಟಿಎಂಎ ಪೈ ಭಾರತೀಯ ಸಾಹಿತ್ಯ ಪೀಠದ ಅಧ್ಯಕ್ಷೆಯಾಗಿರುವ ಖ್ಯಾತ ಸಾಹಿತಿ ವೈದೇಹಿ ಅವರು ಬೋಳುವಾರು ಮಹಮ್ಮದ್ ಕುಂಞ ಹಾಗೂ ಜುಬೇದಾ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.

ಖ್ಯಾತ ಲೇಖಕ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಪ್ರಶಸ್ತಿ ಪುರಸ್ಕೃತ ಪುಸ್ತಕ ಸ್ವಾತಂತ್ರ್ಯ ಓಟದ ಕುರಿತು ಹಾಗೂ ಅವರ ಸಹೋದರ, ರಂಗಕರ್ಮಿ ಐ.ಕೆ.ಬೋಳುವಾರು ತನ್ನಣ್ಣನ ಕುರಿತು ಮಾತನಾಡಿದರು.

ಮಣಿಪಾಲ ವಿವಿಯ ಪ್ರೊ.ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿದರೆ, ವೈದೇಹಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರಲೀಧರ ಉಪಾಧ್ಯ ಹಿರಿಯಡ, ಬೋಳುವಾರು ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಜಿ.ಪಿ.ಪ್ರಭಾಕರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News